ದಿಲ್ಲಿ ಗಲಭೆ ಪ್ರಕರಣ: ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗೈರು ಹಾಜರಿಗೆ ನ್ಯಾಯಾಲಯ ಅಸಮಾಧಾನ

Update: 2021-12-10 20:30 GMT

ಹೊಸದಿಲ್ಲಿ, ಡಿ. 10: ದಿಲ್ಲಿಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಜರಾಗದೇ ಇರುವ ಬಗ್ಗೆ ದಿಲ್ಲಿಯಲ್ಲಿರುವ ನ್ಯಾಯಾಲಯ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ಶಿವ ವಿಹಾರ ತಿರಾಹದಲ್ಲಿ ಮುಸ್ಲಿಮರ ಗುಂಪೊಂದು ಹಿಂದುಗಳ ಮೇಲೆ ದಾಳಿ ನಡೆಸಿದ ಪ್ರಕರಣವನ್ನು ಕಾರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿರೇಂದ್ರ ಭಟ್ ವಿಚಾರಣೆ ನಡೆಸಿದರು.

ಈ ಹಿಂಸಾಚಾರದಲ್ಲಿ ಅಲೋಕ್ ತಿವಾರಿ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಈ ಪ್ರಕರಣ ಆರೋಪಿಗಳ ವಿರುದ್ಧ ಹತ್ಯೆ, ಗಲಭೆ, ಕಾನೂನು ಬಾಹಿರ ಗುಂಪುಗೂಡುವಿಕೆ ಹಾಗೂ ಕ್ರಿಮಿನಲ್ ಪಿತೂರಿಯ ದೋಷಾರೋಪ ಹೊರಿಸಲಾಗಿತ್ತು.
  
2020 ಫೆಬ್ರವರಿ 23 ಹಾಗೂ 26ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳು ಹಾಗೂ ಬೆಂಬಲಿಗರ ಮಧ್ಯೆ ನಡೆದ ಘರ್ಷಣೆಯ ಬಳಿಕ ಒಟ್ಟು 53 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ಹೆಚ್ಚಿನವರು ಮುಸ್ಲಿಮರು.

ಗಲಭೆಗೆ ಸಂಬಂಧಿಸಿದ ಪ್ರಕರಣಗಳು ತುಂಬಾ ಸೂಕ್ಷ್ಮ. ಪರಿಣಾಮಕಾರಿ ವಿಚಾರಣೆಗೆ ಪೊಲೀಸರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ರ ತಂಡವನ್ನು ನಿಯೋಜಿಸಿದೆ ಎಂದು ಭಟ್ ಹೇಳಿದರು.

ನ್ಯಾಯಾಲಯದ ಮುಂದೆ ಹಾಜರಾಗುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿರುವ ಇನ್ನೊಂದು ಪ್ರಕರಣದ ವಿಚಾರಣೆಯಲ್ಲಿ ಬ್ಯುಸಿಯಾಗಿದ್ದಾರೆ. 

ಪ್ರಸಾದ್ ಅವರು ಗೈರು ಹಾಜರಾದ ಕಾರಣ ನ್ಯಾಯಾಲಯದ ಮುಂದೆ ಹಾಜರಾದ ಇಬ್ಬರು ಸಾಕ್ಷಿಗಳ ವಿಚಾರಣೆ ನಡೆಸಿಲ್ಲ ಎಂದು ಭಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News