×
Ad

ನೀರುಮಾರ್ಗ: ವ್ಯಕ್ತಿಯ ಕೊಲೆ ಯತ್ನ ಪ್ರಕರಣ; ನಾಲ್ವರು ಪೊಲೀಸ್ ವಶಕ್ಕೆ

Update: 2021-12-11 12:43 IST

ಮಂಗಳೂರು, ಡಿ.11: ನೀರುಮಾರ್ಗ ಸಮೀಪದ ಪಡು ಪೋಸ್ಟಾಫೀಸ್ ಬಳಿ ತಂಡವೊಂದು ಕಾರನ್ನು ಅಡ್ಡಗಟ್ಟಿ ವ್ಯಕ್ತಿಯೊಬ್ಬನನ್ನು ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಡ್ಯಾರ್‌ಪದವು ನಿವಾಸಿ ಮುಹಮ್ಮದ್ ರಿಯಾಝ್ ಯಾನೆ ರಿಯಾಝ್ ಅಹಮ್ಮದ್ (40) ಪ್ರಕರಣದಲ್ಲಿ ಗಾಯಗೊಂಡ ವ್ಯಕ್ತಿ. ಇವರು ರಿಕ್ಷಾ ಚಾಲಕ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ.

ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ನೀರುಮಾರ್ಗ ಪಡು ಪೋಸ್ಟ್ ಆಫೀಸ್ ಬಳಿ ಶನಿವಾರ ಸಂಜೆ ಯುವಕ ಕಾರಿನಲ್ಲಿ ತೆರಳುತ್ತಿದ್ದಾಗ 7ರಿಂದ 8 ಮಂದಿ ಯುವಕರ ತಂಡವೊಂದು ಅಡ್ಡಗಟ್ಟಿ ಬ್ಯಾಟ್, ಕಬ್ಬಿಣದ ರಾಡ್, ಬಿಯರ್ ಬಾಟ್ಲಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ರಿಯಾಝ್ ಅವರ ತಲೆ, ಕಣ್ಣಿಗೆ ಗಾಯವಾಗಿದ್ದು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ನಡೆದ ಕೂಡಲೇ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಬಳಿಕ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಘಟನೆ ವೇಳೆ ಕಾರಿನಲ್ಲಿ ಮಹಿಳೆಯಿದ್ದಳು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್, "ಕಾರು ತಪಾಸಣೆ ನಡೆಸಿದಾಗ ಮಹಿಳೆಯ ಪಾದರಕ್ಷೆ ಸಿಕ್ಕಿದೆ. ಆದರೆ ಇದು ಯಾರದು ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಕೊಲೆ ಯತ್ನ ಹಾಗೂ ಅದರ ಹಿಂದಿರುವ ಉದ್ದೇಶ ಬಗ್ಗೆ ತನಿಖೆಗೆ ಪೂರಕವಾದ ಕೆಲವೊಂದು ಉಪಯುಕ್ತ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು" ಎಂದರು.

ಗಾಯಗೊಂಡ ವ್ಯಕ್ತಿ ಮಾನವ ಕಳ್ಳಸಾಗಾಣೆ ಮಾಡುತ್ತಿದ್ದ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್, ಈ ಹಿನ್ನಲೆಯಲ್ಲೂ ತನಿಖೆ ನಡೆಸಲಾಗುವುದು. ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ವೈದ್ಯರ ಸಲಹೆ ಮೇರೆಗೆ ಘಟನೆಯ ಬಗ್ಗೆ ಈತನಕ ಯಾವುದೇ ಹೇಳಿಕೆ ಪಡೆದುಕೊಂಡಿಲ್ಲ. ಆರೋಪಿಗಳ ಬಗ್ಗೆ, ಯಾವ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂಬ ಬಗ್ಗೆ ಪೂರಕ ಮಾಹಿತಿ ದೊರಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News