×
Ad

ಜಾನಪದ ಆಡಂಬರಕ್ಕೆ ಸೀಮಿತವಾಗಬಾರದು: ತಲ್ಲೂರು ಶಿವರಾಮ ಶೆಟ್ಟಿ

Update: 2021-12-11 17:45 IST

ಪಡುಬಿದ್ರಿ: ಹಳ್ಳಿ ಜನರ ನಾಡಿ ಮಿಡಿತವೇ ಜಾನಪದ. ಅದೊಂದು ಅದ್ಭುತ ಜ್ಞಾನ ಭಂಡಾರವಾಗಿದ್ದು, ಇದು ಆಡಂಬರಕ್ಕೆ ಸೀಮಿತವಾಗಬಾರದು. ಅದರ ಮೂಲ ತತ್ವವನ್ನು ಅರಿತು ಕಲಾಸಕ್ತರ ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಕರೆ ನೀಡಿದರು.

ಪಡುಬಿದ್ರಿ ಬಂಟರ ಭವನದ ಕೃಷ್ಣ ಸುಧಾಮ ವೇದಿಕೆಯಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ತಿನ ಕಾಪು ತಾಲೂಕು ಘಟಕವನ್ನು ಜನಪದೀಯ ಡೋಲು ಬಡಿದು ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಯ ಯಕ್ಷಗಾನವು ಜನಪದ ಕಲೆಯನ್ನು ಉಳಿಸುವ ಕಾರ್ಯ ಮಾಡಿದ್ದು, ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯದಾದ್ಯಂತ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಲಾಲಾಜಿ ಆರ್.ಮೆಂಡನ್, ಜನಪದ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ದೊರಕಿದಂತಾಗಿದೆ. ಇದನ್ನು ಉಳಿಸಿ ಬೆಳೆಸಲು ಸರ್ವರ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಸನ್ಮಾನ: ಈ ಸಂದರ್ಭ ಜಾನಪದ ಸಾಧಕರಾದ ಸಾಂಪ್ರದಾಯಿಕ ಡೋಲು ವಾದಕ ಗುರುವ ಕಾಪು, ಹಿರಿಯ ಕಂಗೀಲು ಕಲಾವಿದ ಜಗನ್ನಾಥ ಬಂಗೇರ ಮಟ್ಟು, ನಾದಸ್ವರ ವಾದಕ ಜಲೀಲ್ ಸಾಹೇಬ್ ಕಾಪು ಮತ್ತು ಜಾನಪದ ಕಲಾವಿದ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗುರು ಚರಣ್ ಪೊಲಿಪುರವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.

ಪದಗ್ರಹಣ: ಕಾಪು ತಾಲೂಕು ಘಟಕದ ಅಧ್ಯಕ್ಷ ಸಮಾಜರತ್ನ ಲೀಲಾಧರ ಶೆಟ್ಟಿ ಮತ್ತವರ ತಂಡಕ್ಕೆ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ್ ನಾಯಕ್ ಪ್ರತಿಜ್ಞಾವಿಧಿ ಬೋಧಿಸಿದರು.

ಉಪನ್ಯಾಸ: ಜಾನಪದ ವಿದ್ವಾಂಸ ಹಾಗೂ ಲೇಖಕ ಕೆ.ಎಲ್.ಕುಂಡಂತಾಯ, ಜಾನಪದ ವಿದ್ವಾಂಸ ಹಾಗೂ ಚಿಂತಕ ಡಾ.ವೈ.ಎನ್.ಶೆಟ್ಟಿ ಮತ್ತು ಸಮಾಜ ಸೇವಕ ಹಾಗೂ ವಾಗ್ಮಿ ಸುರೇಶ್ ಶೆಟ್ಟಿ ಗುರ್ಮೆ ಜಾನಪದ ಬಗ್ಗೆ ವಿಶೇಷ ಉಪನ್ಯಾಸಗೈದರು.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪದ್ರ, ಉದ್ಯಮಿ ನವೀನ್‍ಚಂದ್ರ ಜೆ.ಶೆಟ್ಟಿ, ಕಾಪು ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಸಮಾಜರತ್ನ ಲೀಲಾಧರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಲೀಲಾಧರ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಗುರು ಚರಣ್ ಪೊಲಿಪು ಪ್ರಸ್ತಾವಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸತ್ಯವತಿ ಮಲ್ಲಾರ್ ವಂದಿಸಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾವಿದರಿಂದ ಕಂಗೀಲು ಕುಣಿತ, ಕೊಳಲು ವಾದನ, ಪಾರ್ದನ, ಕರಗ ಕುಣಿತ, ಪೂಜಾ ಕುಣಿತ, ದಶಾವತಾರ ನೃತ್ಯ, ಆಟಿ ಕಳಂಜ ಮಹಾಕಾಳಿ ಕುಣಿತ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News