ಮಣಿಪಾಲದಲ್ಲಿ ಅನೈತಿಕ ಪೊಲೀಸ್‌ಗಿರಿ: ಮೂವರು ಪೊಲೀಸ್ ವಶಕ್ಕೆ
Update: 2021-12-11 17:55 IST
ಮಣಿಪಾಲ, ಡಿ.11: ಮಣಿಪಾಲ ಮಣ್ಣಪಳ್ಳದಲ್ಲಿ ವಿಹಾರಕ್ಕೆ ಬಂದಿದ್ದ ಯುವಕ ಮತ್ತು ಯುವತಿಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆದಿದೆ.
ಸಾಲಿಗ್ರಾಮದ ಅಲ್ತಾಫ್(27) ಎಂಬಾತ ತನ್ನ ನೆರೆಮನೆಯ ಸ್ನೇಹಿತಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದನು. ಅಲ್ಲಿಂದ ಅವರಿಬ್ಬರು ತಿರುಗಾಡಲು ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿಗೆ ಹೋದಾಗ ಆರೋಪಿಗಳಾದ ಪರ್ಕಳದ ಹೆರ್ಗದ ಪ್ರಾಣೇಶ್, ವಿನೂತ್ ಪೂಜಾರಿ ಮತ್ತು ಸಂಜಯ್ ಕುಮಾರ್ ಎಂಬವರು ಇವರಿಬ್ಬರನ್ನು ತಡೆದು ನಿಲ್ಲಿಸಿದರು. ನಂತರ ಇವರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ತಾಫ್‌ನನ್ನು ಕೈಯಿಂದ ತಳ್ಳಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.
ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 341,504, 506, 323 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.