×
Ad

ಸವಾಲುಗಳನ್ನು ಸ್ವೀಕರಿಸಿ ಅವಕಾಶಗಳ ಸದ್ಬಳಕೆ ಮಾಡಿ: ಅಮಿತಾಬ್ ಕಾಂತ್

Update: 2021-12-11 18:08 IST

ಕೊಣಾಜೆ: ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ) 11ನೇ ವಾರ್ಷಿಕ ಘಟಿಕೋತ್ಸವವು ಆನ್ಲೈನ್ ಮಾದ್ಯಮದ ಮೂಲಕ ಯೆನೆಪೋಯ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೇಂದ್ರ ಸರಕಾರದ ಎನ್‍ಐಟಿಐ ಆಯೋಗದ ಮುಖ್ಯ ಕಾರ್ಯನಿರ್ವಹಕಾ ಅಧಿಕಾರಿ ಅಮಿತಾಬ್ ಕಾಂತ್ ತಮ್ಮ ಅತಿಥಿ ಭಾಷಣದಲ್ಲಿ ಕೋವಿಡ್ ಮಹಾ ಸಾಂಕ್ರಾಮಿಕ ಸಮಾಜದಲ್ಲಿ ವಿವಿಧ ಸಮಸ್ಯೆ ಹಾಗೂ ಸವಾಲುಗಳ ನಡುವೆ ಭಾರತ ದೇಶವು ಆರೋಗ್ಯ, ಶಿಕ್ಷಣ , ವಿಜ್ಞಾನ, ತಾಂತ್ರಿಕತೆ, ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮೆರೆದಿದೆ. ಆರೋಗ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳು ನಡೆಯುತ್ತಿವೆ. ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಪದವೀಧರರು ತಮ್ಮ ಶಕ್ತಿ ಸಾಮರ್ಥ್ಯಗಳ ಮೇಲೆ ವಿಶ್ವಾಸವಿರಿಸಿ ಸವಾಲುಗಳನ್ನು ಮೆಟ್ಟಿ ನಿಂತು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕುಎಂದು ಅಭಿಪ್ರಾಯಪಟ್ಟರು.

ಘಟಿಕೋತ್ಸವದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ನಾನ ವಿಶ್ವವಿದ್ಯಾನಿಲಯದ ಉಪಕುಲಪತಿ ಹಾಗೂ ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಡಾ.ರಮೇಶ್ ಎಮ್.ಕೆ ಮಾತನಾಡಿ, ಕೋವಿಡ್ ಮಹಾಮಾರಿ ನಮ್ಮೆದುರು  ಹಲವಾರು ಪಂಥಾಹ್ವಾನಗಳನ್ನು ಒಡ್ಡಿದೆ. ಇದು ಪ್ರತಿದಿನ ಹೊಸ ಕಲಿಕೆ, ತಾಂತ್ರಿಕತೆಯ ಆವಿಷ್ಕಾರಕ್ಕೆ ನಾಂದಿ ಹಾಡಿದೆ. ರೋಗಿಗಳ ಸೇವೆಯನ್ನು ಪರಿಣಾಮಕಾರಿ ರೀತಿಯಲ್ಲಿ ಮಾಡಲು ಜನರ ಅದ್ಯತೆಗಳನ್ನು ಗುರುತಿಸಿ ಉತ್ತಮ  ದೃಷ್ಟಿಕೋನದಿಂದ ಪರಿಹರಿಸಲು ಶ್ರಮಿಸಬೇಕು. ಸಮುದಾಯದಲ್ಲಿ  ಜಾಗೃತಿ ಮೂಡಿಸುವ ಮೂಲಕ ರೋಗಗಳ ನಿಯಂತ್ರಣವನ್ನು ಸಾಧಿಸಬಹುದಾಗಿದೆ, ಯೆನೆಪೋಯ ವಿಶ್ವವಿದ್ಯಾನಿಲಯವು ಅನೆಕ ಶೈಕ್ಷಣಿಕ ಕಾರ್ಯಕ್ರಮ ಹಾಗೂ ತರಬೇತಿ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನಾರ್ಹ ವಿಚಾರ ಎಂದು ಅವರು ಅಭಿಪ್ರಾಯ ಪಟ್ಟರು.

ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ) ಕುಲಾಧಿಪತಿಗಳಾದ ಯೆನೆಪೋಯ ಅಬ್ದುಲ್ಲ ಕುಂಞಿಯವರು ಘಟಿಕೋತ್ಸವ ಅಧ್ಯಕ್ಷತೆಯನ್ನು ವಹಿಸಿ ಪದವಿ ಪ್ರಧಾನ ಮಾಡಿದರು. ಉಪಕುಲಪತಿಗಳಾದ ಡಾ. ವಿಜಯ ಕುಮಾರ್ ಸ್ವಾಗತ ಕೋರಿ ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು.

ವಿಶ್ವವಿದ್ಯಾನಿಲಯದ ಪರೀಕ್ಷಾಂಗ ನಿಯಂತ್ರಣಾಧಿಕಾರಿಯಾದ ಡಾ. ಬಿ.ಟಿ ನಂದೀಶ್ ಪದವೀಧರರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.  ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಗಂಗಾಧರ ಸೋಮಯಾಜಿ ಕೆ.ಎಸ್, ವಂದನಾರ್ಪಣೆಗೈದರು.  ಡಾ. ಮಲ್ಲಿಕಾ ಶೆಟ್ಟಿ ಮತ್ತು ಡಾ. ರೋಶಲ್ ಟೆಲಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News