×
Ad

​ಸೌಹಾರ್ದ ಸಹಕಾರಿ ಕಾಯ್ದೆ ಅಗತ್ಯ ತಿದ್ದುಪಡಿ ಜಾರಿ: ಬಿ.ಎಚ್.ಕೃಷ್ಣಾರೆಡ್ಡಿ

Update: 2021-12-11 18:42 IST

ಉಡುಪಿ, ಡಿ.11: ನಿರಂತರ ಪ್ರಯತ್ನದ ಫಲವಾಗಿ ಸೌಹಾರ್ದ ಸಹಕಾರಿ ಅಧಿನಿಯಮಕ್ಕೆ ಅಗತ್ಯ ತಿದ್ದುಪಡಿಗಳು ಅ.7ರಿಂದ ಜಾರಿಗೆ ಬಂದಿದೆ. ಈ ಹಿಂದೆ ಸೌಹಾರ್ದ ಸಹಕಾರಿ ಕ್ಷೇತ್ರದ ಮೂಲ ಆಶಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ತಿದ್ದುಪಡಿಗಳು ಆಗುತ್ತಿದ್ದು, ಅದನ್ನು ಸರಿಪಡಿಸುವ ಕಾರ್ಯವನ್ನು ಈಗಿನ ಸರಕಾರ ಮಾಡಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯಿದೆಯಲ್ಲಿ ಪ್ರಮುಖವಾಗಿ ಆದಾಯ ತೆರಿಗೆ ತೊಂದರೆ ನಿವಾರಣೆಯಾಗು ವಂತೆ ಎಲ್ಲ ಶಾಸನಗಳಲ್ಲಿ ಸೌಹಾರ್ದ ಸಹಕಾರಿಗಳು ಕೂಡ ಸಹಕಾರ ಸಂಘ ಗಳೆಂದು ಪರಿಗಣಿಸಲು ಸಾಧ್ಯವಾಗುವಂತೆ ತಿದ್ದುಪಡಿ ಮಾಡಲಾಗಿದೆ ಮತ್ತು ಸದಸ್ಯರು ಹೊಂದಿರಬಹುದಾದ ಗರಿಷ್ಠ ಷೇರು ಮಿತಿಯನ್ನು ಶೇರು ಬಂಡ ವಾಳದ ಶೇ.5ಕ್ಕೆ ನಿಗದಿಪಡಿಸಲಾಗಿದೆ ಎಂದರು.

ಆದಾಯ ತೆರಿಗೆ ತೊಂದರೆಗಳ ನಿವಾರಣೆ ಕುರಿತು ಕೇಂದ್ರ ಸಹಕಾರ ಸಚಿವ ಅಮಿತ್ ಶಾರನ್ನು ಭೇಟಿ ಮನವಿ ಸಲ್ಲಿಸಲಾಗಿದೆ. ಅದರ ನಿವಾರಣೆಗೆ ಪ್ರಯತ್ನ ಜಾರಿಯಲ್ಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಇದೇ ವೇಳೆ ಸಂಯುಕ್ತ ಸಹಕಾರಿಯ ಬೆಂಗಳೂರಿನ ನಿರ್ಮಿಸಲಾದ ಕೇಂದ್ರ ಕಚೇರಿ ಕಟ್ಟಡ ಉದ್ಘಾಟನೆಗೆ ಸಚಿವರನ್ನು ಆಹ್ವಾನಿಸಲಾಗಿದೆ. ಇದರ ಉದ್ಘಾಟನೆ ಜನವರಿ ತಿಂಗಳಲ್ಲಿ ನಡೆಯ ಲಿದೆ ಎಂದು ಅವರು ಹೇಳಿದರು.

ಸಂಯುಕ್ತ ಸಹಕಾರಿ ವಾರ್ಷಿಕ ಸಭೆಯನ್ನು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಡಿ.23ರಂದು ನಡೆಸಲು ತೀರ್ಮಾನಿಸಲಾಗಿದೆ. ಇದರಲ್ಲಿ 1200ಕ್ಕೂ ಅಧಿಕ ಸೌಹಾರ್ದ ಸಹಕಾರಿ ಪ್ರತಿನಿಧಿಗಳು ಭಾಗವಹಿಸಲಿರುವರು ಎಂದ ಅವರು, ರಾಜ್ಯದಲ್ಲಿ 5400ಕ್ಕೂ ಅಧಿಕ ಸೌಹಾರ್ದ ಸಹಕಾರಿಗಳು ನೋಂದಣಿ ಯಾಗಿದ್ದು, 50ಲಕ್ಷಕ್ಕೂ ಅಧಿಕ ಸದಸ್ಯರು ತೊಡಗಿಸಿಕೊಂಡಿದ್ದಾರೆ. 750ಕೋಟಿ ರೂ. ಪಾಲು ಬಂಡವಾಳ, 15000ಕೋಟಿ ರೂ.ಗಳ ಠೇವಣಿ, 1000ರೂ. ಕೋಟಿ ಗಳ ನಿಧಿಗಳು, 12000 ಕೋಟಿ ರೂ.ಗಳ ಸಾಲ, 18000ಕೋಟಿ ರೂ.ಗಳ ದುಡಿಯುವ ಬಂಡವಾಳ ಮತ್ತು 230ಕೋಟಿ ರೂ.ಗಳ ಲಾಭವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್.ಕೆ., ವೃತ್ತಿಪರ ನಿರ್ದೇಶಕ ಬೋಳಾ ಸದಾಶಿವ ಶೆಟ್ಟಿ, ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಶಿವಕುಮಾರ್ ಬಿರಾದಾರ್, ಜಿಲ್ಲಾ ಸಂಯೋಜಕ ವಿಜಯ ಬಿ.ಎಸ್. ಉಪಸ್ಥಿತರಿದ್ದರು.

‘ಅತಿ ಹೆಚ್ಚಿನ ಬಡ್ಡಿ ಆಮಿಷ’
ಕೆಲವು ಸಹಕಾರಿ ಸಂಸ್ಥೆಗಳು ಕಾನೂನು ಉಲ್ಲಂಘಿಸಿ ಅನಗತ್ಯವಾಗಿ ಶಾಖೆ ಗಳನ್ನು ತೆರೆಯುತ್ತಿದ್ದು, ಅತಿ ಹೆಚ್ಚಿನ ಬಡ್ಡಿ ಆಮಿಷ ಒಡ್ಡುತ್ತಿದೆ. ಇಂತಹ ಸಂಸ್ಥೆ ಗಳ ಬಗ್ಗೆ ಸ್ಥಳೀಯ ಜಿಲ್ಲಾ ಒಕ್ಕೂಟಗಳು, ಸಹಕಾರ ಸಂಸ್ಥೆಗಳು ಅಗತ್ಯ ಕಾನೂನು ಪ್ರಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಬಿ.ಎಚ್.ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಕೆಲವು ಸಹಕಾರ ಸಂಸ್ಥೆಗಳು ಠೇವಣಿದಾರರ ಹಣವನ್ನು ಕಾಯ್ದೆಗೆ ವಿರುದ್ಧ ವಾಗಿ ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಿರುವುದು ಆತಂಕಕಾರಿ ಯಾಗಿದೆ. ಇದರಿಂದ ಸಹಕಾರ ಸಂಸ್ಥೆಗಳು ತಾವು ಹಣ ಕಳೆದುಕೊಂಡ ಠೇವಣಿ ದಾರರಿಗೆ ಹಣ ಹಿಂತಿರುಗಿಸಲಾಗದ ಸ್ಥಿತಿಗೆ ತೆರಳುತ್ತಿವೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News