‘ಭಾರತವು ಶೋಕದಲ್ಲಿದೆ’: ಜ.ರಾವತ್ ಗೆ ಮೋದಿ ಶ್ರದ್ಧಾಂಜಲಿ

Update: 2021-12-11 14:14 GMT

ಬಲರಾಮಪುರ (ಉ.ಪ್ರ),ಡಿ.11: ತಮಿಳುನಾಡಿನ ಕೂನೂರು ಸಮೀಪ ಇತ್ತೀಚಿಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರರ ಸಾವುಗಳಿಗೆ ಶನಿವಾರ ಸಂತಾಪಗಳನ್ನು ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರು,ಜ.ರಾವತ್ ಅವರ ನಿಧನವು ಪ್ರತಿಯೊಬ್ಬ ದೇಶಪ್ರೇಮಿಯ ಪಾಲಿಗೆ ಅಪಾರ ನಷ್ಟವಾಗಿದೆ ಎಂದು ಹೇಳಿದರು.

ಜ.ರಾವತ್ ಧೀರ ಸೇನಾಧಿಕಾರಿಯಾಗಿದ್ದರು ಮತ್ತು ದೇಶದ ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಯಾಗಿಸಲು ಶ್ರಮಿಸಿದ್ದರು. ಇಡೀ ದೇಶವು ಇದಕ್ಕೆ ಸಾಕ್ಷಿಯಾಗಿದೆ ಎಂದು ಇಲ್ಲಿ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮೋದಿ ನುಡಿದರು.

ಓರ್ವ ಯೋಧ ಸೇನೆಯಲ್ಲಿದ್ದಷ್ಟು ಅವಧಿಗೆ ಮಾತ್ರ ಯೋಧನಾಗಿರುವುದಿಲ್ಲ,ಆತ ಜೀವಮಾನವಿಡೀಯೋಧನಾಗಿಯೇ ಇರುತ್ತಾನೆ. ಆತ ಪ್ರತಿ ಕ್ಷಣವೂ ಶಿಸ್ತು ಮತ್ತು ದೇಶದ ಹೆಮ್ಮೆಗೆ ಸಮರ್ಪಿತನಾಗಿರುತ್ತಾನೆ ಎಂದು ಹೇಳಿದ ಪ್ರಧಾನಿ,ಮುಂಬರುವ ದಿನಗಳಲ್ಲಿ ಜ.ರಾವತ್ ಎಲ್ಲಿಯೇ ಇರಲಿ,ಹೊಸ ಸಂಕಲ್ಪಗಳೊಂದಿಗೆ ಭಾರತವು ಮುಂದುವರಿಯುತ್ತಿರುವುದನ್ನು ಅವರು ನೋಡುತ್ತಿರುತ್ತಾರೆ ಎಂದರು.

‘ಭಾರತವು ಶೋಕದಲ್ಲಿದೆ,ಆದರೂ ಅದು ತನ್ನ ಪುರೋಗಮನನ್ನು ಮತ್ತು ಅಭಿವೃದ್ಧಿಯನ್ನು ನಿಲ್ಲಿಸುವುದಿಲ್ಲ, ಭಾರತವೆಂದೂ ಸ್ಥಗಿತಗೊಳ್ಳುವುದಿಲ್ಲ. ನಾವು ಭಾರತೀಯರು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಮತ್ತು ದೇಶದೊಳಗಿನ ಮತ್ತು ಹೊರಗಿನ ಪ್ರತಿಯೊಂದೂ ಸವಾಲನ್ನು ಎದುರಿಸುತ್ತೇವೆ ’ಎಂದು ಮೋದಿ ಹೇಳಿದರು.

ಡಿ.8ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡು ಸಂಭವಿಸಿದ ದುರಂತದಲ್ಲಿ ಜ.ರಾವತ್,ಅವರ ಪತ್ನಿ ಮಧುಲಿಕಾ ರಾವತ್ ಮತ್ತು 11 ಇತರ ರಕ್ಷಣಾ ಅಧಿಕಾರಿಗಳು ಮೃತಪಟ್ಟಿದ್ದರು. ಬದುಕುಳಿದಿರುವ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಏರ್ಫೋರ್ಸ್ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸಿಂಗ್ ಅವರ ಶೀಘ್ರ ಚೇತರಿಕೆಯನ್ನು ಹಾರೈಸಿದ ಮೋದಿ, ಉ.ಪ್ರದೇಶದ ಪುತ್ರ,ದೇವರಿಯಾ ನಿವಾಸಿ ಸಿಂಗ ಅವರ ಜೀವವನ್ನುಳಿಸಲು ವೈದ್ಯರು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅವರ ಜೀವ ಉಳಿಸುವಂತೆ ತಾನು ಮಾ ಪತೇಶ್ವರಿಯನ್ನು ಪ್ರಾರ್ಥಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ಇಡೀ ದೇಶವೇ ಅವರ ಕುಟುಂಬದೊಂದಿಗೆ ಇದೆ ಎಂದರು.ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲ ಕುಟುಂಬಗಳೊಂದಿಗೂ ದೇಶವು ನಿಂತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News