ಉಡುಪಿ: ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಉದ್ಘಾಟನೆ
ಉಡುಪಿ, ಡಿ.11: ಉಡುಪಿ ರಂಗಭೂಮಿ ಆಶ್ರಯದಲ್ಲಿ 10 ದಿನಗಳ ಕಾಲ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳ ಲಾದ ದಿ.ಡಾ.ಟಿಎಂಎ ಪೈ, ದಿ.ಎಸ್.ಎಲ್.ನಾರಾಯಣ ಭಟ್ ಮತ್ತು ದಿ.ಮಲ್ಪೆ ಮಧ್ವರಾಜ ಸ್ಮಾರಕ 42ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಪ್ರಮೋದ್ ಮಧ್ವರಾಜ್, ಜಗತ್ತು ಬದಲಾದಂತೆ ಜಗತ್ತಿನಲ್ಲಿರುವ ಜನರ ಆಸಕ್ತಿಯೂ ಬದಲಾಗುತ್ತದೆ. ಕನ್ನಡ ನಾಟಕದ ಬಗ್ಗೆ ಜನರಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ತುಳು ನಾಟಕವಿದ್ದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಆದರೆ ರಂಗಭೂಮಿ ಇವೆಲ್ಲವನ್ನೂ ಮೆಟ್ಟಿನಿಂತಿದೆ. ಉಡುಪಿ ಸಾಂಸ್ಕೃತಿಕ ರಾಜಧಾನಿಯಾಗಿದೆ. ಹಿಂದಿನ ಪರಂಪರೆ ಸಾಲಿಗೆ ಉಡುಪಿ ರಂಗಭೂಮಿ ಬೆಳೆದು ನಿಂತಿದೆ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕಾ, ಉದ್ಯಮಿ ಸತ್ಯಾನಂದ ನಾಯಕ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮುಖ್ಯ ಅತಿಥಿಗಳಾಗಿದ್ದರು.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಎಂ.ನಂದ ಕುಮಾರ್ ಉಪಸ್ಥಿತರಿದ್ದರು. ರಂಗಭೂಮಿ ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ವಂದಿಸಿದರು. ಬಳಿಕ ಬೆಂಗಳೂರು ಅಭಿನಯ ತರಂಗ ತಂಡದಿಂದ ಕೋರ್ಟ್ ಮಾರ್ಷಲ್ ನಾಟಕ ಪ್ರದರ್ಶನಗೊಂಡಿತು.