ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮಹಿಳೆ ಮೃತ್ಯು
Update: 2021-12-11 23:17 IST
ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಬೋಂದೆಲ್ ಬಳಿಯ ಕೃಷ್ಣನಗರದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಆಂಧ್ರಪ್ರದೇಶ ಮೂಲದ ತಿಮ್ಮಕ್ಕ(42) ಎಂದು ತಿಳಿದು ಬಂದಿದೆ.
ಮಂಗಳೂರು ಮಹಾನಗರ ಪಾಲಿಕೆಯ ಜಲಸಿರಿ ಯೋಜನೆಯಡಿ ಪೈಪ್ ಲೈನ್ ಹಾಕಲು ಗುಂಡಿ ಅಗೆಯುವ ಕಾಮಗಾರಿ ನಡೆಸುತ್ತಿದ್ದಾಗ ತಡೆಗೋಡೆ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಮಹಿಳೆ ಮಣ್ಣಿನಡಿಯಲ್ಲಿ ಸಿಲುಕಿದ್ದು, ಬಳಿಕ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಗರ ಪಾಲಿಕೆಯ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರನ ಮೇಲೆ ಕಾವೂರು ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.