ಅರ್ಜೆಂಟೀನಾ: ಐಎಂಎಫ್ ಸಾಲ ಒಪ್ಪಂದ ವಿರೋಧಿಸಿ ಪ್ರತಿಭಟನೆ

Update: 2021-12-12 17:11 GMT

ಬ್ಯೂನಸ್ ಐರಿಸ್, ಡಿ.12: ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯೊಂದಿಗೆ ಯಾವುದೇ ರೀತಿಯ ಸಾಲ ಪುನರ್ರಚನೆ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿ ಸಾವಿರಾರು ಜನ ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.

ಜನರಿಗೆ ಕೆಲವು ವಿಷಯದ ಬಗ್ಗೆ ಅರಿವು ಇಲ್ಲದಿರಬಹುದು. ಆದರೆ ಈ ದೇಶದಲ್ಲಿ ಐಎಂಎಫ್ ಎಂಬ ಪದದ ವಾಸ್ತವಾಂಶ ಅವರಿಗೆ ತಿಳಿದಿದೆ. ಐಎಂಎಫ್‌ನಿಂದ ಈ ದೇಶಕ್ಕೆ ಹೆಚ್ಚಿನ ದುರ್ಗತಿ ಮತ್ತು ಪರಾವಲಂಬನೆಯ ಸ್ಥಿತಿ ಒದಗಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದರೆ ದೇಶ ವಿಪತ್ತಿನತ್ತ ಸಾಗಲಿದೆ ಎಂಬುದು ಜನತೆಗೆ ತಿಳಿದಿದೆ ಎಂದು ರ್ಯಾಲಿಯ ಸಂಘಟಕರಲ್ಲಿ ಒಬ್ಬರಾದ ಕಾರ್ಲೋಸ್ ಅಝ್ನಾನರೆಸ್ ಹೇಳಿದ್ದಾರೆ.

ಅರ್ಜೆಂಟೀನಾವು ಐಎಂಎಫ್‌ಗೆ 44 ಬಿಲಿಯನ್ ಡಾಲರ್ ಮೊತ್ತದ ಸಾಲ ಪಾವತಿಸಲು ಬಾಕಿಯಿದ್ದು ಈ ಸಾಲವನ್ನು ಪುನರ್ರಚಿಸುವ ಬಗ್ಗೆ ಸರಕಾರ ಮಾತುಕತೆ ನಡೆಸುತ್ತಿದೆ. 2018ರ ಮಾರ್ಚ್‌ನಲ್ಲಿ ಅರ್ಜೆಂಟೀನಾ ಸರಕಾರ ಐಎಂಎಫ್‌ನೊಂದಿಗೆ 57 ಬಿಲಿಯನ್ ಸಾಲ ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಲ್ಲಿ 47 ಬಿಲಿಯನ್ ಡಾಲರ್ ಸಾಲವನ್ನು ಬಿಡುಗಡೆಗೊಳಿಸಲಾಗಿದೆ. 2020ರಲ್ಲಿ ಅಧ್ಯಕ್ಷರಾದ ಆಲ್ಬರ್ಟೊ ಫೆರ್ನಾಂಡಿಸ್ ಉಳಿದ ಸಾಲವನ್ನು ಪಡೆಯಲು ನಿರಾಕರಿಸಿದ್ದು ಈಗಾಗಲೇ ನೀಡಿರುವ ಸಾಲವನ್ನು ಪುನರ್ರಚಿಸಬೇಕು (ಬಡ್ಡಿ ಸಹಿತ ಬಾಕಿ ಮೊತ್ತವನ್ನು ಸೇರಿಸಿ ಹೊಸ ಸಾಲ ಎಂದು ನಿಗದಿಗೊಳಿಸುವುದು) ಎಂದು ಒತ್ತಾಯಿಸುತ್ತಿದ್ದಾರೆ.

ಈ ಕುರಿತ ನೂತನ ಒಪ್ಪಂದದ ಪ್ರಕಾರ, 2022 ಮತ್ತು 2023ರಲ್ಲಿ ಸರಕಾರ ತಲಾ 19 ಬಿಲಿಯನ್ ಡಾಲರ್ ಪಾವತಿಸಬೇಕು. ಆದರೆ ಆರ್ಥಿಕ ಸಮಸ್ಯೆ ಮತ್ತು ಹಣದುಬ್ಬರದ ಪ್ರಮಾಣ ಅಧಿಕವಾಗಿರುವುದರಿಂದ ಇಷ್ಟು ಮೊತ್ತ ಪಾವತಿಸುವುದು ಕಷ್ಟಸಾಧ್ಯ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಸಾಲ ಮರುಪಾವತಿಸಬೇಕಿದ್ದರೆ ಹಲವು ಕಠಿಣ ಕ್ರಮ ಜಾರಿಗೊಳಿಸುವ ಅಗತ್ಯವಿದ್ದು ಇದು ಜನರನ್ನು ಸಮಸ್ಯೆಗೆ ಒಡ್ಡಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News