ಮಂಗಳೂರು: ಕುಟುಂಬದ ನಾಲ್ವರ ಸಾವು ಪ್ರಕರಣ; ಡೆತ್‌ನೋಟ್, ವಾಯ್ಸ್ ಮೆಸೇಜ್ ಬಗ್ಗೆ ಕೂಲಂಕಷ ತನಿಖೆಗೆ ಆಗ್ರಹ
ಮಂಗಳೂರು, ಡಿ.13: ಮೋರ್ಗನ್ಸ್‌ಗೇಟ್‌ನ ಮನೆಯೊಂದರಲ್ಲಿ ಪತ್ನಿ, ಮಕ್ಕಳನ್ನು ಕೊಲೆ ಮಾಡಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಡೆತ್ ನೋಟ್, ವಾಯ್ಸ್ ಮೆಸೇಜ್ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಒತ್ತಾಯ ಮಾಡಿದ ಸಂಘಟನೆಯ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ, ಪ್ರಕರಣದಲ್ಲಿ ನೂರ್‌ಜಹಾನ್ ಎಂಬ ಮಹಿಳೆಯ ಮೇಲಿನ ಮತಾಂತರ ಆರೋಪ ರಾಜಕೀಯ ಪ್ರೇರಿತವಾಗಿದೆ. ಸದ್ಯದ ಪೊಲೀಸ್ ತನಿಖೆಯು ಸಂಘ ಪರಿವಾರ ಒತ್ತಡಕ್ಕೆ ಮಣಿದು ಏಕಪಕ್ಷೀಯವಾಗಿ ಸಾಗುತ್ತಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದರು.
ಮೃತರಾಗಿರುವ ನಾಗೇಶ್- ವಿಜಯಲಕ್ಷ್ಮೀ ದಂಪತಿ ಕುರಿತು ನೂರ್ ಜಹಾನ್ ಎಂಬ ಮಹಿಳೆಯ ಮೇಲಿನ ಆರೋಪ ಸ್ವೀಕಾರಾರ್ಹವಲ್ಲ. ನಾಗೇಶ್ ಮದ್ಯವ್ಯಸನಿಯಾಗಿದ್ದು, ಆಕೆಗೆ ಕಿರುಕುಳ ನೀಡುತ್ತಿದ್ದ ಬಗ್ಗೆ, ಆಕೆ ಮನೆ ತೊರೆದಿದ್ದ ಬಗ್ಗೆ ಈ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾನವೀಯ ನೆಲೆಯಲ್ಲಿ ನೀಡಿದ ನೆರವನ್ನೇ ಮತಾಂತರ ಎಂಬ ಗುಲ್ಲೆಬ್ಬಿಸಿ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.
ಓರ್ವ ಜವಾಬ್ದಾರಿಯುತ ನಾಗರಿಕರಾಗಿ ನೂರ್‌ಜಹಾನ್ ವಿಜಯಲಕ್ಷ್ಮಿ ಅವರಿಗೆ ನೆರವು ನೀಡಿದ್ದಾರೆ. ಆದರೆ ಪತ್ನಿ ತನ್ನನ್ನು ತೊರೆಯಬಹುದು ಎಂಬ ಆತಂಕದಿಂದ ಖಿನ್ನತೆಗೊಳಗಾಗಿ ಅಥವಾ ದ್ವೇಷ ಸಾಧಿಸಲು ಆರೋಪಿತ ಮಹಿಳೆ ನೂರ್ ಜಹಾನ್ ವಿರುದ್ಧ ಈ ಆರೋಪ ಹೊರಿಸಿರಬಹುದು. ದೌರ್ಜನ್ಯಕ್ಕೊಳಗಾದವರಿಗೆ ನೆರವು ನೀಡುವುದು ಮಾನವ ಸಹಜ ಗುಣ. ಹಾಗಾಗಿ ಸಂತ್ರಸ್ತ ಹೆಣ್ಣಿಗೆ ಬೆಂಗಾವಲಾಗಿ ನಿಂತ ಮಹಿಳೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಸಮಾಜಕ್ಕೆ ಯಾವ ಸಂದೇಶವನ್ನು ನೀಡಲಾಗುತ್ತಿದೆ ಎಂಬುದನ್ನು ಅವಲೋಕಿಸಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆ ಯಾರೂ ಸಂತ್ರಸ್ತರಿಗೆ ನೆರವು ನೀಡಲು ಮುಂದೆ ಬರಲಾರರು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ ಆಯಿಷಾ ಬಜ್ಪೆ, ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಮನಪಾ ಸದಸ್ಯೆ ಸಂಶಾದ್ ಅಬೂಬಕರ್, ಮಲ್ಲೂರು ಗ್ರಾ.ಪಂ. ಉಪಾಧ್ಯಕ್ಷೆ ಪ್ರೇಮಾ ಮಲ್ಲೂರು ಉಪಸ್ಥಿತರಿದ್ದರು.
‘ಪತ್ನಿ ಮಕ್ಕಳನ್ನು ಕೊಲೆಗೈದ ವ್ಯಕ್ತಿಯನ್ನು ಅಮಾಯಕನನ್ನಾಗಿಸುವ ಪ್ರಯತ್ನ’
ಪ್ರಕರಣದಲ್ಲಿ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಲೆಗೈದು ಕ್ರೌರ್ಯ ಮೆರೆದ ನಾಗೇಶ್‌ರನ್ನು ಅಮಾಯಕನಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಮತಾಂತರದ ನೆಪದಲ್ಲಿ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಮುಸ್ಲಿಂ- ಕ್ರೈಸ್ತ ಸಮುದಾಯವನ್ನು ನಿರಂತರವಾಗಿ ಗುರಿಪಡಿಸುವ ಕಾರ್ಯ ಮಾಡುತ್ತಿವೆ. ಯಾವುದೇ ಕಾರಣಕ್ಕೂ ಇಸ್ಲಾಂ ಧರ್ಮದಲ್ಲಿ ಬಲವಂತದ ಮತಾಂತರ ನಡೆಸಲಾಗುವುದಿಲ್ಲ. ನಡೆಸುವುದೂ ತಪ್ಪು ಎಂದು ಧರ್ಮವೇ ಹೇಳುತ್ತದೆ. ಹಾಗಿರುವಾಗ ಈ ಪ್ರಕರಣದಲ್ಲಿ ಬಲವಂತದ ಮತಾಂತರ ನಡೆಸುವ ಯತ್ನ ನಡೆಸಿರುವ ಪ್ರಶ್ನೆಯೇ ಬರುವುದಿಲ್ಲ ಎಂದು ಶಾಹಿದಾ ತಸ್ನೀಂ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.