ಮತಾಂತರ ನಿಷೇಧ ಕಾಯಿದೆ ಜಾರಿಯಾದರೆ ಕ್ರೈಸ್ತರ ಮೇಲೆ ಇನ್ನಷ್ಟು ವ್ಯವಸ್ಥಿತ ದಾಳಿಗಳ ಸಾಧ್ಯತೆ: ಭಾರತೀಯ ಕ್ರೈಸ್ತ ಒಕ್ಕೂಟ

Update: 2021-12-13 13:47 GMT

ಉಡುಪಿ, ಡಿ.13: ರಾಜ್ಯ ಸರಕಾರ ತರಾತುರಿಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಬಲವಂತದ ಮತಾಂತರ ಎಂಬುದು ಕ್ರೈಸ್ತ ಸಮುದಾಯವನ್ನು ಧಮಿಸಲು ರಾಜಕೀಯ ಪ್ರೇರಿತ ಸಂಘಟನೆ ಬಳಸುತ್ತಿರುವ ಅಸ್ತ್ರವಾಗಿದೆ. ಕಾಯಿದೆ ಜಾರಿ ಬರುವ ಮೊದಲೇ ಕ್ರೈಸ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ ಇವರು, ಬಂದ ನಂತರ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ವ್ಯವಸ್ಥಿತ ದಾಳಿಗಳನ್ನು ನಡೆಸಬಹುದು ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ್ ಜತ್ತನ್ನ, ಬಲವಂತ ಹಾಗೂ ಆಮಿಷದ ಮತಾಂತರವನ್ನು ಒಕ್ಕೂಟ ತೀವ್ರವಾಗಿ ವಿರೋಧಿಸುತ್ತದೆ. ಈ ರೀತಿ ಯಾರಾದರೂ ತಮ್ಮ ಮನೆ, ಚರ್ಚ್‌ಗಳಲ್ಲಿ ಮಾಡಿದರೆ ನಾವೇ ಅವರ ವಿರುದ್ಧ ದೂರು ದಾಖಲಿಸಿ, ಆ ಸ್ಥಳ ವನ್ನು ಮುಚ್ಚಿಸಲು ಬದ್ಧರಾಗಿದ್ದೇವೆ ಎಂದರು.

'ಒಂದೇ ಒಂದು ಸಾಕ್ಷ್ಯ ಇಲ್ಲ'
ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲು ಹೊರಟಿರುವ ಸರಕಾರದಲ್ಲಿ ಈ ಸಂಬಂಧ ಯಾವುದೇ ಪೂರಕ ದಾಖಲೆ, ಸಾಕ್ಷ್ಯಗಳಿಲ್ಲ. ಕೇವಲ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಕೆಲವು ಸಂಘಟನೆಗಳ ಒತ್ತಡಕ್ಕೆ ಮಣಿದು ಸರಕಾರ ಈ ಕಾಯಿದೆ ತರಲು ಹೊರಟಿದೆ. ಎಲ್ಲೂ ಕೂಡ ಬಲವಂತದ ಮತಾಂತರ ಮಾಡಿರುವ ಬಗ್ಗೆ ಒಂದೇ ಒಂದು ಸಾಕ್ಷ್ಯಗಳಿಲ್ಲ ಎಂದು ಅವರು ತಿಳಿಸಿದರು.

ಈ ಕಾಯಿದೆ ಜಾರಿಯಾದರೆ ದುರುಪಯೋಗ ಮಾಡಿ ಒಂದು ಸಮುದಾಯವನ್ನು ಗುರಿಯಾಗಿಸಲು ಕೆಲವು ಸಂಘಟನೆಗಳಿಗೆ ಸುಲಭವಾಗುತ್ತದೆ. ಬಲವಂತ ಹಾಗೂ ಆಮಿಷದ ಮತಾಂತರ ಮಾಡಬಾರದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದೆ. ಈಗಿರುವಾಗ ಇದಕ್ಕೆ ಪ್ರತ್ಯೇಕ ಕಾನೂನು ಅಗತ್ಯ ಇಲ್ಲ ಎಂದು ಅವರು ಹೇಳಿದರು.

'ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ'
ಕ್ರೈಸ್ತರು ಭಾರತದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸುತ್ತಾರೆ. ಆದರೆ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದ ಕೆಲವು ಸಂಘಟನೆಯವರು ಪ್ರಾರ್ಥನ ಸ್ಥಳಕ್ಕೆ ನುಗ್ಗಿ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ವಿಷ ಬೀಜವನ್ನು ಬಿತ್ತುವ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಕ್ರೈಸ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುವವರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ರೈಸ್ತ ಸಂಘ ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ನೇರಿ ಕರ್ನೆಲಿಯೋ, ಕಾರ್ಯದರ್ಶಿ ರಿಚಾರ್ಡ್ ಡಯಸ್, ಕಾನೂನು ಸಲಹೆಗಾರ ನ್ಯಾಯವಾದಿ ನೋಯೆಲ್ ಪ್ರಶಾಂತ್ ಕರ್ಕಡ, ಒಕ್ಕೂಟದ ರಾಜ್ಯ ಸಂಚಾಲಕ ಗ್ಲಾಡ್ಸನ್ ಕರ್ಕಡ ಉಪಸ್ಥಿತರಿದ್ದರು.

17ರಂದು ಉಪವಾಸ ಸತ್ಯಾಗ್ರಹ
ಮತಾಂತರ ನಿಷೇಧ ಕಾಯಿದೆಯನ್ನು ವಿರೋಧಿಸಿ ಡಿ.17ರಂದು ಬೆಳ ಗಾವಿಯ ವಿಕಾಸ ಸೌಧದ ಎದುರು ಒಂದು ದಿವಸದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಒಕ್ಕೂಟದ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಪ್ರಶಾಂತ್ ಜತ್ತನ್ನ ತಿಳಿಸಿದರು.

ಆದರೂ ಈ ಕಾಯಿದೆ ಜಾರಿಗೆ ತಂದರೆ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News