ಬೆಳ್ತಂಗಡಿ: ಕಾರು-ಬೈಕ್ ಢಿಕ್ಕಿ; ಯುವಕ ಮೃತ್ಯು

Update: 2021-12-13 16:35 GMT

ಬೆಳ್ತಂಗಡಿ, ಡಿ.13: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸಹಸವಾರ ಯುವಕನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿ ಎದುರು ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಮಚ್ಚಿನ ಗ್ರಾಮದ ಬಂಗೇರಕಟ್ಟೆ ಸಾಲ್ಮರ ಮನೆಯ ನಿವಾಸಿ ವಾಸು ಮೂಲ್ಯ ಎಂಬವರ ಪುತ್ರ ಯತಿನ್ ಮೂಲ್ಯ(24) ಮೃತಪಟ್ಟವರು. ಬೈಕ್ ಚಲಾಯಿಸುತ್ತಿದ್ದ ಪಾರೆಂಕಿ ಗ್ರಾಮದ ಪ್ರದೀಪ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಪ್ರದೀಪ್ ಮತ್ತು ಯತಿನ್ ಸಂಬಂಧಿಕರಾಗಿದ್ದು, ಇವರಿಬ್ಬರು ಬೆಳ್ತಂಗಡಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೈಕಿನಲ್ಲಿ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪ್ರದೀಪ್ ಚಲಾಯಿಸುತ್ತಿದ್ದ ಬೈಕ್ ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿರುವ ಆನ್ ಸಿಲ್ಕ್ ಅಂಗಡಿ ಬಳಿ ಕಾರೊಂದಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಯತಿನ್ ಮೂಲ್ಯರ ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಪ್ರದೀಪ್ ನೀಡಿರುವ ದೂರಿನಂತೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News