×
Ad

ಅಮೆರಿಕ: ಆರಂಭಿಕ ಒಮೈಕ್ರಾನ್ ಸೋಂಕು ಪ್ರಕರಣ ಲಸಿಕೆ ಪಡೆದವರಲ್ಲಿ ಪತ್ತೆ

Update: 2021-12-13 22:16 IST
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್, ಡಿ.13: ಅಮೆರಿಕದಲ್ಲಿ ಆರಂಭದಲ್ಲಿ ಪತ್ತೆಯಾಗಿರುವ ಒಮೈಕ್ರಾನ್ ಸೋಂಕು ಪ್ರಕರಣ ಬಹುತೇಕ ಲಸಿಕೆ ಪಡೆದವರಲ್ಲೇ ಕಂಡುಬಂದಿದೆ. ಇವರಲ್ಲಿ ಅಲ್ಪಪ್ರಮಾಣದ ಅಸ್ವಸ್ಥತೆಯ ಲಕ್ಷಣ ಕಂಡುಬಂದಿದ್ದು ಒಬ್ಬ ವ್ಯಕ್ತಿಯನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ ಎಂದು ಅಮೆರಿಕದ ರೋಗನಿಯಂತ್ರಣ ಮತ್ತು ತಡೆ ಕೇಂದ್ರ (ಸಿಪಿಸಿ) ಹೇಳಿದೆ.

ಡಿಸೆಂಬರ್ 8ರವರೆಗೆ ಅಮೆರಿಕದಲ್ಲಿ ಒಮೈಕ್ರಾನ್‌ನ  43 ಪ್ರಕರಣ ವರದಿಯಾಗಿದ್ದು ಇದರಲ್ಲಿ 80%ದಷ್ಟು ಪ್ರಕರಣ ಪೂರ್ಣ ಪ್ರಮಾಣದ ಲಸಿಕೆ ಪಡೆದವರಲ್ಲೇ ಪತ್ತೆಯಾಗಿದೆ. ಇದರಲ್ಲಿ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ 2 ದಿನ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಕೆಮ್ಮು, ಬಳಲಿಕೆ, ಮೂಗಿನಲ್ಲಿ ಸ್ರಾವ ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ ಎಂದು ಸಿಪಿಸಿ ವರದಿ ಮಾಡಿದೆ. ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ಒಮೈಕ್ರಾನ್‌ನ ತೀವ್ರತೆಯನ್ನು ಅಂದಾಜಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ‌

ಒಮೈಕ್ರಾನ್ ಪ್ರಸಾರವಾಗುವ ವೇಗ, ಅದು ಪ್ರತಿರೋಧಕ ಶಕ್ತಿಯಿಂದ ಹೇಗೆ ನುಣುಚಿಕೊಳ್ಳುತ್ತದೆ ಮತ್ತು ಇದರಿಂದ ಜನರು ಯಾವ ರೀತಿ ಅಸ್ವಸ್ಥಗೊಳ್ಳುತ್ತಾರೆ ಎಂಬ ಬಗ್ಗೆ ಅಧ್ಯಯನ ಮುಂದುವರಿದಿದೆ. ದಾಖಲಾಗಿರುವ ಹಲವು ಪ್ರಕರಣಗಳಲ್ಲಿ ಒಮೈಕ್ರಾನ್ ಸೌಮ್ಯಲಕ್ಷಣದ ಸೋಂಕು ಎಂದು ಕಂಡುಬಂದಿದ್ದರೂ ಇತರ ಎಲ್ಲಾ ರೂಪಾಂತರಗಳಲ್ಲಿ ಕಂಡುಬಂದಂತೆ ಸೋಂಕು ಮತ್ತು ಗಂಭೀರ ಪ್ರಮಾಣದ ಕುರಿತ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ . 

ಆರಂಭಿಕ ಮಾಹಿತಿಯ ಆಧಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರುವುದು ತರವಲ್ಲ. ಯಾಕೆಂದರೆ ಇತ್ತೀಚೆಗೆ ಅಂತರಾಷ್ಟ್ರೀಯ ಪ್ರಯಾಣ ಮಾಡಿದವರು ಎಳೆಯರಾಗಿರುವ ಸಾಧ್ಯತೆಯಿದ್ದು ಲಸಿಕೆ ಪಡೆದಿರಬಹುದು . ಇದುವರೆಗೆ ವರದಿಯಾಗಿರುವ ಒಮೈಕ್ರಾನ್‌ನ ಬಹುತೇಕ ಪ್ರಕರಣ 40 ವರ್ಷದೊಳಗಿನ ವಯಸ್ಕರಲ್ಲಿ ಕಂಡುಬಂದಿದೆ ಎಂದು ಸಿಡಿಸಿ ವರದಿ ಹೇಳಿದೆ.

ಅಲ್ಲದೆ, ಆರಂಭಿಕ ಸೋಂಕು ಪ್ರಕರಣದ ಮೂರನೇ ಒಂದರಷ್ಟು ಪ್ರಮಾಣದ ರೋಗಿಗಳು ಬೂಸ್ಟರ್ ಡೋಸ್ ಪಡೆದಿದ್ದರೆ, ಇವರಲ್ಲಿ ಹಲವರು ಅಸ್ವಸ್ಥರಾಗುವ 2 ವಾರಗಳ ಮೊದಲು ಬೂಸ್ಟರ್ ಡೋಸ್ ಪಡೆದವರು. ಇದುವರೆಗೆ ಪತ್ತೆಯಾಗಿರುವ ಒಮೈಕ್ರಾನ್ ಪ್ರಕರಣದ 14%ದಷ್ಟು ಸೋಂಕಿತರು ಈ ಹಿಂದೆ ಕೊರೋನ ಸೋಂಕಿಗೆ ಒಳಗಾದವರು. ಡಿಸೆಂಬರ್ 8ವರೆಗೆ, ಅಮೆರಿಕದ 22 ರಾಜ್ಯಗಳಲ್ಲಿ ಒಮೈಕ್ರಾನ್ ಸೋಂಕು ಪತ್ತೆಯಾಗಿದೆ. ಅಮೆರಿಕದಲ್ಲಿ ಒಮೈಕ್ರಾನ್ ಸೋಂಕಿನ ಪ್ರಕರಣ ಮೊದಲ ಬಾರಿಗೆ ನವೆಂಬರ್ 15ರಂದು ದೃಢಪಟ್ಟಿದೆ. ಅಂದರೆ ದಕ್ಷಿಣ ಆಫ್ರಿಕಾದಲ್ಲಿ ಒಮೈಕ್ರಾನ್ ಸೋಂಕು ಪ್ರಕರಣ ದೃಢಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವುದಕ್ಕಿಂತ 9 ದಿನ ಮೊದಲು. ಈ ಹಿನ್ನೆಲೆಯಲ್ಲಿ, ಒಮೈಕ್ರಾನ್ ಸೋಂಕು ದಕ್ಷಿಣ ಆಫ್ರಿಕಾದಲ್ಲಿ ದೃಢಪಟ್ಟಿರುವುದಕ್ಕಿಂತಲೂ ಮೊದಲೇ ಅಮೆರಿಕದಲ್ಲಿ ಇತ್ತು ಎಂದು ವರದಿ ಹೇಳಿದೆ.

ಇದು ಪ್ರಾರಂಭಿಕ ಹಂತದ ವರದಿಯಷ್ಟೇ. ಒಮೈಕ್ರಾನ್ ಸೌಮ್ಯರೂಪದ ಸೋಂಕು ಎಂದು ನಿರ್ಧರಿಸುವ ಮುನ್ನ ಎಚ್ಚರಿಕೆ ವಹಿಸಬೇಕಾಗಿದೆ. ಸೌಮ್ಯತೆಗೆ ಲಸಿಕೆ ಪಡೆದಿರುವುದು ಒಂದು ಕಾರಣವಾಗಿರಬಹುದು ಎಂದು ಲಸಿಕೆ ಸಂಶೋಧನಾ ಕೇಂದ್ರದ ನಿರ್ದೇಶಕ ಗ್ರೆಗೊರಿ ಪೊಲಂಡ್ ಹೇಳಿದ್ದಾರೆ. ಬೂಸ್ಟರ್ ಲಸಿಕೆ ಪಡೆಯುವುದು, ಕಡ್ಡಾಯ ಮಾಸ್ಕ್ ಧಾರಣೆ ಸೋಂಕಿನಿಂದ ರಕ್ಷಣೆ ಪಡೆಯಲು ಜನರ ಮುಂದಿರುವ ಅತ್ಯುತ್ತಮ ಕಾರ್ಯತಂತ್ರವಾಗಿದೆ ಎಂದವರು ಹೇಳಿದ್ದಾರೆ.

ಲಸಿಕೆ ಪಡೆದ ಆರೋಗ್ಯವಂತ ವ್ಯಕ್ತಿಗಳಿಗೆ ಒಮೈಕ್ರಾನ್ನಿಂದ ಹೆಚ್ಚಿನ ಸಮಸ್ಯೆಯಿರುವಂತೆ ಕಾಣುವುದಿಲ್ಲ. ಆದರೆ ಹಿರಿಯ ನಾಗರಿಕರು ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಒಮೈಕ್ರಾನ್ ಬೀರುವ ಪರಿಣಾಮವನ್ನು ಇನ್ನಷ್ಟೇ ತಿಳಿದುಕೊಳ್ಳಬೇಕಾಗಿದೆ ಎಂದು ವಿಸ್ಕಾನ್ಸಿನ್‌ನ ಸಾಂಕ್ರಾಮಿಕ ರೋಗ ತಜ್ಞೆ ನಾಸಿಯಾ ಸಫ್ದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News