ಮಂಗಳೂರು: ಕಂಪೆನಿಯ ಉಡುಗೊರೆ ಕೊಡುವ ಆಮಿಷವೊಡ್ಡಿ ವಂಚನೆ
ಮಂಗಳೂರು, ಡಿ.13: ಕಂಪನಿಯೊಂದರ ಉಡುಗೊರೆಯನ್ನು ನೀಡುವುದಾಗಿ ಆಶ್ವಾಸನೆ ನೀಡಿದ ಅಪರಿಚಿತನೊಬ್ಬ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 30 ಸಾವಿರ ರೂ. ವಂಚಿಸಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭಿಷೇಕ್ ಚೌಧರಿ ಎಂಬ ಹೆಸರಿನ ವ್ಯಕ್ತಿಯೊಬ್ಬ ಆ.21ರಂದು ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ನಾನು ನೈಕಾ ಕಂಪನಿಯ ಪ್ರತಿನಿಧಿ. ನಿಮಗೆ ಉಡುಗೊರೆ ಲಭಿಸಿದೆ. ಇದಕ್ಕೆ ಮುಂಗಡ ಪಾವತಿಸಬೇಕು ಎಂದು ಹೇಳಿದ. ಅದನ್ನು ನಂಬಿದ ಫಿರ್ಯಾದಿದಾರರು 10,098 ರೂ.ವನ್ನು ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ ಪಾವತಿಸಿದ್ದಾರೆ. ಆದರೆ ಆ ವಸ್ತುಗಳ ವಾರೆಂಟಿಗೆ 11,200 ರೂ. ಮತ್ತೆ ಕಳಿಸುವಂತೆ ಅಬಿಷೇಕ್ ಚೌಧರಿ ಎಂಬ ಹೆಸರಿನ ಅಪರಿಚಿತ ವ್ಯಕ್ತಿ ಹೇಳಿದ. ನನಗೆ ಯಾವ ಉಡುಗೊರೆಯೂ ಬೇಡ, ನನ್ನ ಮುಂಗಡ ಹಣ ಪಾವತಿಸುವಂತೆ ದೂರುದಾರರು ಒತ್ತಾಯಿಸಿದ್ದಾರೆ. ನಿಮ್ಮೆಲ್ಲಾ ಹಣವನ್ನು ಮರುಪಾವತಿ ಮಾಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯು ಪುನಃ ಹಂತ ಹಂತವಾಗಿ 10,098ರೂ. ಮತ್ತು 9,999ರೂ. ಸಹಿತ ಒಟ್ಟು 30,195 ರೂ.ವನ್ನು ಪಡೆದು ವಂಚಿಸಿದ್ದಾನೆ ಎಂದು ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.