ನೀರುಮಾರ್ಗ: ರಿಯಾಝ್ ಕೊಲೆಯತ್ನ ಪ್ರಕರಣ; ಐವರು ಆರೋಪಿಗಳ ಬಂಧನ
Update: 2021-12-14 12:01 IST
ಮಂಗಳೂರು, ಡಿ.14: ನೀರುಮಾರ್ಗ ಸಮೀಪದ ಪಡು ಅಂಚೆ ಕಚೇರಿಯ ಬಳಿ ಕಾರನ್ನು ಅಡ್ಡಗಟ್ಟಿ ವ್ಯಕ್ತಿಯೋರ್ವನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸುವಿತ್ ರಂಗಪಾದೆ(19), ಗಣೇಶ್ ಕಾಪೆಟ್ಟು(23), ಚೇತನ್ ಬಂಟುಕಟ್ಟ(21), ಕೀರ್ತಿರಾಜ್ ಕಟಿಂಜ ಸೈಟ್(23) ಹಾಗೂ ಪರೀಕ್ಷಿತ್ ಪಡು(20) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಡ್ಯಾರ್ ಪದವು ನಿವಾಸಿ ರಿಯಾಝ್ ಅಹ್ಮದ್ ಎಂಬವರು ಡಿ.10ರಂದು ಸಂಜೆ ನೀರುಮಾರ್ಗ ಪಡು ಪೋಸ್ಟ್ ಆಫೀಸ್ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ 7-8 ಮಂದಿಯನ್ನು ಒಳಗೊಂಡ ಯುವಕರ ತಂಡವೊಂದು ಅವರನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ತೀವ್ರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿತ್ತು. ಇದರಿಂದ ರಿಯಾಝ್‌ರ ತಲೆ, ಕಣ್ಣಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.