×
Ad

ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಗೆದ್ದ ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ

Update: 2021-12-14 12:38 IST

ಮಂಗಳೂರು, ಡಿ.14: ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತದ ವಿಧಾನ ಪರಿಷತ್‌ನ ದ್ವಿ ಸದಸ್ಯತ್ವ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಇಬ್ಬರೂ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಜಯ ಗಳಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಾಗಿದೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆ ಸಚಿವರಾಗಿರುವ ಕೋಟ ಶ್ರೀನಿವಾಸ 3,672 ಮತಗಳನ್ನು ಗಳಿಸಿ ಮತ್ತೊಮ್ಮೆ ರಾಜ್ಯ ಶಾಸಕಾಂಗದ 'ಮೇಲ್ಮನೆ' ಪ್ರವೇಶಿಸಿದ್ದಾರೆ. ಮಂಜುನಾಥ ಭಂಡಾರಿ 2,079 ಮತಗಳನ್ನು ಗಳಿಸಿ ಮೊದಲ ಬಾರಿ 'ಮೇಲ್ಮನೆ' ಪ್ರವೇಶಿಸಿದ್ದಾರೆ. ಎಸ್ ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 204 ಮತಗಳನ್ನು ಗಳಿಸಿದ್ದಾರೆ. 56 ಮತಗಳು ಅಸಿಂಧುವಾಗಿವೆ.

ಒಟ್ಟು ಚಲಾವಣೆಯಾಗಿರುವ 6,011 ಮತಗಳಲ್ಲಿ 56 ಮತಗಳು ಅಸಿಂಧುಗೊಂಡಿದ್ದರಿಂದ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಲು 1,986 ಮತಗಳನ್ನು ಗಳಿಸಬೇಕಿತ್ತು. 

ವಿಜೇತರ ಪ್ರತಿಕ್ರಿಯೆ

ಗೆಲುವಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ, "ಮತದಾರರಿಗೆ ಮತ್ತು ಖರ್ಚುವೆಚ್ಚಕ್ಕೆ ಹಣ ಹಂಚಿಕೆ ಮಾಡದೆ ಗೆಲುವು ಪಡೆದಿದ್ದೇನೆ. ಇದು ನೈಜವಾದ ಮತದಾರರ ಗೆಲುವು. ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ" ಎಂದು ಹೇಳಿದರು.

ಮಂಜುನಾಥ ಭಂಡಾರಿ ಮಾತನಾಡಿ, "ಇದು ಪಕ್ಷದ ಕಾರ್ಯಕರ್ತರ ಹಾಗೂ ಪಕ್ಷದ ಗೆಲುವು. ಪ್ರಥಮ ಪ್ರಾಶಸ್ತ್ಯ ದ ಮತಗಳಿಗೆ 300ರಷ್ಟು  ಮತಗಳ ಕೊರತೆ ಇದ್ದರೂ ಮತದಾರರು ಸಹಕರಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಸ್ಪರ್ಧೆಗೆ ಅವಕಾಶ ನೀಡಿ ಶ್ರಮಿಸಿದ ಎಲ್ಲರನ್ನೂ ನೆನಪಿಸುತ್ತೇನೆ" ಎಂದು ಹೇಳಿದರು.

ಗೆಲುವಿನ ಸಂಭ್ರಮ

 ಗೆಲುವು ನಿಚ್ಚಳವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಕೋಟ ಶ್ರೀನಿವಾಸ ಪೂಜಾರಿಯವರನ್ನು ಎತ್ತಿ ಹಿಡಿದು ಸಂಭ್ರಮಾಚರಣೆಯಲ್ಲಿ ತೊಡಗಿದರು. ಈ ವೇಳೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಸತೀಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಮಂಜುನಾಥ ಭಂಡಾರಿಯವರನ್ನು ಎತ್ತಿ ಹಿಡಿದು, ಪಕ್ಷದ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಈ ಸಂದರ್ಭ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News