ಲಖಿಂಪುರ ಖೇರಿ ಹಿಂಸಾಚಾರ;ಉತ್ತರಪ್ರದೇಶದ ರೈತರ ಹತ್ಯೆಯು "ಯೋಜಿತ ಪಿತೂರಿ" : ಎಸ್‌ಐಟಿ

Update: 2021-12-14 07:48 GMT

ಲಖಿಂಪುರ ಖೇರಿ: ಇಡೀ ದೇಶದ ಗಮನ ಸೆಳೆದಿರುವ ಅಕ್ಟೋಬರ್ 3 ರ ಲಖೀಂಪುರ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) 13 ಆರೋಪಿಗಳ ವಿರುದ್ಧ ಹೊಸ ಸೆಕ್ಷನ್‌ಗಳನ್ನು ಸೇರಿಸಿ, ಅವರ ಅಪರಾಧವನ್ನು ಕೊಲೆ ಯತ್ನದ ಅಡಿಯಲ್ಲಿ ಶಿಕ್ಷಾರ್ಹಗೊಳಿಸಲು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ಮುಂದೆ ಅರ್ಜಿ ಸಲ್ಲಿಸಿದೆ. ಉತ್ತರಪ್ರದೇಶದ ರೈತರ ಹತ್ಯೆ ಘಟನೆಯು ಯೋಜಿತ ಹಾಗೂ ಉದ್ದೇಶಪೂರ್ವಕ ಕೃತ್ಯವಾಗಿದೆಯೇ ಹೊರತು ನಿರ್ಲಕ್ಷತನದಿಂದಲ್ಲ ಎಂದು ತನಿಖಾಧಿಕಾರಿ ತಮ್ಮ ಅರ್ಜಿಯಲ್ಲಿ ಸೂಚಿಸಿದ್ದಾರೆ.

ಐಪಿಸಿ ಸೆಕ್ಷನ್ 279, 338 ಮತ್ತು 304ಎ ಬದಲಿಗೆ ವಾರಂಟ್‌ನಲ್ಲಿ ಹೊಸ ಸೆಕ್ಷನ್‌ಗಳನ್ನು ಸೇರಿಸಲು ಎಸ್‌ಐಟಿ ತನಿಖಾಧಿಕಾರಿ ವಿಧ್ಯಾರಾಮ್ ದಿವಾಕರ್ ಅವರು ಕಳೆದ ವಾರ ಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅಕ್ಟೋಬರ್ 3 ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಗೆ ಸೇರಿದ ಎಸ್ಯುವಿ ಪ್ರತಿಭಟನಾನಿರತ ರೈತರ ಮೇಲೆ ಹರಿದ ಪರಿಣಾಮವಾಗಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಹಿಂಸಾಚಾರದಲ್ಲಿ ಸ್ಥಳೀಯ ಪತ್ರಕರ್ತರೂ ಸಾವನ್ನಪ್ಪಿದ್ದಾರೆ.

ಆಶಿಶ್ ಮಿಶ್ರಾ, ಲುವ್ಕುಶ್, ಆಶಿಶ್ ಪಾಂಡೆ, ಶೇಖರ್ ಭಾರ್ತಿ, ಅಂಕಿತ್ ದಾಸ್, ಲತೀಫ್, ಶಿಶುಪಾಲ್, ನಂದನ್ ಸಿಂಗ್, ಸತ್ಯಂ ತ್ರಿಪಾಠಿ, ಸುಮಿತ್ ಜೈಸ್ವಾಲ್, ಧರ್ಮೇಂದ್ರ ಬಂಜಾರಾ, ರಿಂಕು ರಾಣಾ ಹಾಗೂ ಉಲ್ಲಾಸ್ ತ್ರಿವೇದಿ ಅವರನ್ನು ಎಸ್‌ಐಟಿ ಇದುವರೆಗೆ ಬಂಧಿಸಿದೆ. ಅವರನ್ನು ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.

ಏತನ್ಮಧ್ಯೆ, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ರಾಜ್ಯ ಸರಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News