ಆಹಾರ ವಸ್ತುವಿನ ಅಂಶಗಳು ಸಸ್ಯಜನ್ಯವೇ, ಪ್ರಾಣಿ ಜನ್ಯವೇ ಎಂಬುದನ್ನು ಬಹಿರಂಗಪಡಿಸಿ: ಹೈಕೋರ್ಟ್

Update: 2021-12-14 18:26 GMT

ಹೊಸದಿಲ್ಲಿ, ಡಿ. 14: ಎಲ್ಲಾ ಆಹಾರ ಉದ್ಯಮ ನಿರ್ವಾಹಕರು ಯಾವುದೇ ಆಹಾರ ವಸ್ತು ತಯಾರಿಸಲು ಬಳಸಲಾದ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಹೇಳಿದೆ. ತಾವು ಏನು ಸೇವಿಸುತ್ತಿದ್ದೇವೆ ಎಂದು ತಿಳಿಯಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಪ್ರತಿಪಾದಿಸಿದೆ. 

ಆಹಾರ ವಸ್ತುಗಳ ಅಂಶಗಳ ಕೋಡ್ ಹೆಸರನ್ನು ಮಾತ್ರ ಬಹಿರಂಗಪಡಿಸಿದರೆ ಸಾಲದು. ಬದಲಾಗಿ ಆಹಾರ ವಸ್ತುಗಳಲ್ಲಿ ಅವುಗಳ ಶೇಕಡವಾರು ಪರಿಗಣಿಸದೆ ಅದು ಸಸ್ಯ ಮೂಲವೇ ಅಥವಾ ಪ್ರಾಣಿ ಮೂಲವೇ ಅಥವಾ ಪ್ರಯೋಗಶಾಲೆಯಲ್ಲಿ ಉತ್ಪಾದಿಸಲಾಗಿದೆಯೋ ಎಂಬುದನ್ನು ಬಹಿರಂಗಪಡಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. 

ಸಂದರ್ಭಾನುಸಾರ ಎಲ್ಲಾ ಅಂಶಗಳನ್ನು ಯಾವ ಅಳತೆಯಲ್ಲಿ ಬಳಸಲಾಗಿದ್ದರೂ ಅದು ಸಸ್ಯ ಮೂಲವೇ, ಪ್ರಾಣಿ ಮೂಲವೇ ಎಂಬುದನ್ನು ತಕ್ಕಮಟ್ಟಿಗೆ ಬಹಿರಂಗಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಹಾಗೂ ಜಸ್ಮೀತ್ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

 ಆಹಾರ ಉದ್ಯಮ ನಿರ್ವಾಹಕರು ಅಗತ್ಯತೆಗಳನ್ನು ಅನುಸರಿಸಲು ವಿಫಲವಾದರೆ ಆಹಾರ ಸೇವಿಸುವ ಸಾರ್ವಜನಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆರೋಪದಲ್ಲಿ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ತಮ್ಮ ತಿಳಿಯುವ ಹಕ್ಕಿಗೆ ಗೌರವ ನೀಡಬೇಕು ಎಂದು ಆಗ್ರಹಿಸಿ ಸರಕಾರೇತರ ಟ್ರಸ್ಟ್ ರಾಮ್ ಗೋ ರಕ್ಷಕ ದಳ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿ ನ್ಯಾಯಾಲಯ ಈ ಆದೇಶ ನೀಡಿತು. ಆಹಾರ ಉತ್ಪನ್ನಗಳ ಹಾಗೂ ಪ್ರಸಾಧನ ಸಾಮಗ್ರಿಗಳ ಲೇಬಲಿಂಗ್ ಕುರಿತಂತೆ ಅಸ್ತಿತ್ವದಲ್ಲಿರುವ ಕ್ರಮಗಳನ್ನು ಕಟ್ಟುನಿಟ್ಟಿನಲ್ಲಿ ಅನುಸರಿಸುವಂತೆ ಟ್ರಸ್ಟ್ ನ್ಯಾಯಾಲಯವನ್ನು ಆಗ್ರಹಿಸಿತು. 

ಇತರ ಎಲ್ಲಾ ವಸ್ತುಗಳಿಗೆ ಕೂಡ ಈ ನಿಯಮವನ್ನು ಕಡ್ಡಾಯಗೊಳಿಸಬೇಕು ಎಂದು ಅದು ಮನವಿ ಮಾಡಿತು. ಟ್ರಸ್ಟ್ನ ಸದಸ್ಯರು ಸಿಖ್ಖ್ ಧರ್ಮದ ನಾಮಧಾರಿ ಪಂಥದ ಅನುಯಾಯಿಗಳು. ಅವರು ಕಟ್ಟುನಿಟ್ಟಾಗಿ ಸಸ್ಯಾಹಾರ ಪಾಲಿಸುತ್ತಿರುವವರು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಕಟ್ಟುನಿಟ್ಟಿನ ಸಸ್ಯಾಹಾರ ಪ್ರತಿಪಾದಿಸುವವರು. ಸಸ್ಯಹಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವವರಿಗೆ ಮಾರುಕಟ್ಟೆಯಲ್ಲಿ ಬಳಕೆಗೆ ಯೋಗ್ಯವಾದ ಯಾವ ಉತ್ಪನ್ನಗಳು ಲಭ್ಯವಿವೆ ಎಂದು ತಿಳಿದಿಲ್ಲ. ಯಾಕೆಂದರೆ, ತಿನ್ನಬಹುದಾದ ಉತ್ಪನ್ನಗಳು ಸೇರಿದಂತೆ ಬಹಳಷ್ಟು ಉತ್ಪನ್ನಗಳು ಒಂದೋ ಪ್ರಾಣಿ ಮೂಲದ ಅಂಶವನ್ನು ಒಳಗೊಂಡಿರುತ್ತದೆ ಅಥವಾ ಅದನ್ನು ಸ್ಪಷ್ಟವಾಗಿ ಸಸ್ಯಾಹಾರ ಎಂದು ಪ್ರತಿಪಾದಿಸಲು ಸಾಧ್ಯವಾಗದ ರೀತಿಯಲ್ಲಿ ಸಂಸ್ಕರಣೆಗೆ ಒಳಗಾಗಿರುತ್ತದೆ ಎಂದು ದೂರುದಾರರು ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News