ಪಾಕಿಸ್ತಾನಿ ಆಹಾರೋತ್ಸವ ಏರ್ಪಡಿಸಿದ ರೆಸ್ಟಾರೆಂಟ್ ಬ್ಯಾನರ್‌ ಗಳನ್ನು ಹರಿದು ಹಾಕಿ ಬೆದರಿಸಿದ ಬಜರಂಗದಳ ಕಾರ್ಯಕರ್ತರು

Update: 2021-12-14 09:47 GMT
Photo: Video Screengrab/Facebook/aslamcyclewala

ಹೊಸದಿಲ್ಲಿ: ಗುಜರಾತ್‍ನ ಸೂರತ್ ನಗರದಲ್ಲಿರುವ ಟೇಸ್ಟ್ ಆಫ್ ಇಂಡಿಯಾ  ತಾನು ಡಿಸೆಂಬರ್ 12 ರಿಂದ 22ರ ತನಕ ಪಾಕಿಸ್ತಾನಿ ಆಹಾರೋತ್ಸವ ಆಯೋಜಿಸುವುದಾಗಿ ಹೇಳಿಕೊಂಡು ಪ್ರದರ್ಶಿಸಿದ್ದ ಹೋರ್ಡಿಂಗ್ ಮತ್ತು ಬ್ಯಾನರ್‍ಗಳನ್ನು  ಬಜರಂಗದಳ ಕಾರ್ಯಕರ್ತರು ನಾಶಗೈದು  ರೆಸ್ಟಾರೆಂಟ್ ಉದ್ಯೋಗಿಗಳಿಗೆ ಬೆದರಿಕೆಯೊಡ್ಡಿದ ನಂತರ ರೆಸ್ಟಾರೆಂಟ್ ಈ ಆಹಾರೋತ್ಸವವನ್ನು ರದ್ದುಗೊಳಿಸಿದೆ ಎಂದು Thewire.in ವರದಿ ಮಾಡಿದೆ.

ರೆಸ್ಟಾರೆಂಟ್ ತಾನು ಆಯೋಜಿಸಲಿರುವ ಆಹಾರೋತ್ಸವದ ಕುರಿತಂತೆ ಹಾಕಿದ್ದ ಬ್ಯಾನರ್ ಮೊದಲು ಸೂರತ್ ನಗರದ ಮಾಜಿ ಕಾಂಗ್ರೆಸ್ ಕೌನ್ಸಿಲರ್ ಅಸ್ಲಂ ಸೈಕಲ್‍ವಾಲ ಅವರ ಗಮನ ಸೆಳೆದಿತ್ತು. ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರಲ್ಲದೆ "ವಿಪಕ್ಷಕ್ಕೆ ಸೇರಿದವರ್ಯಾರಾದರೂ ಈ ಬ್ಯಾನರ್ ಹಾಕಿದ್ದರೆ, ರೆಸ್ಟಾರೆಂಟ್ ಮಾಲೀಕರನ್ನು ದೇಶದ್ರೋಹಿ ಎಂದು ಬಣ್ಣಿಸಲು ಬಿಜೆಪಿ ಹಿಂಜರಿಯುವುದಿಲ್ಲ" ಎಂದು ಬರೆದಿದ್ದರು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋಮವಾರ ಬಜರಂಗದಳ ಸದಸ್ಯರು ರೆಸ್ಟಾರೆಂಟ್ ಸಿಬ್ಬಂದಿಗೆ ಬೆದರಿಕೆಯೊಡ್ಡಿದ್ದರು ಹಾಗೂ ಕೆಲವರು ಫ್ಲೆಕ್ಸ್ ಬೋರ್ಡ್ ಅನ್ನು ಹರಿದು ಅದಕ್ಕೆ ಬೆಂಕಿ ಹಚ್ಚಿ ಜೈ ಶ್ರೀ ರಾಮ್ ಘೋಷಣೆ ಮೊಳಗಿಸಿದ್ದರು.

ಈ ಹೋರ್ಡಿಂಗ್ ನಾಶಗೈಯ್ಯುವ ಮುನ್ನ ಸಂಘಟನೆಯು ತನ್ನ ದಕ್ಷಿಣ ಗುಜರಾತ್ ಸಂಚಾಲಕ ದಿನೇಶ್ ನಾವಡಿಯಾ ಅವರ ಅನುಮತಿಯನ್ನೂ ಪಡೆದುಕೊಂಡಿತ್ತು ಎಂದು ಸ್ಥಳೀಯ ಬಜರಂಗದಳ ನಾಯಕ ದೇವಿಪ್ರಸಾದ್ ದುಬೆ ಹೇಳಿಕೊಂಡಿದ್ದಾರೆ.

ಈ ರೆಸ್ಟಾರೆಂಟ್ ಮಾಲೀಕ ಸಂದೀಪ್ ದಾವರ್ ನಂತರ ಆಹಾರೋತ್ಸವದ ಹೆಸರನ್ನು ಸೀ ಫುಡ್ ಪೆಸ್ಟಿವಲ್ ಎಂದು ಬದಲಾಯಿಸಬೇಕಾಯಿತು ಹಾಗೂ ಕ್ಷಮೆಯನ್ನೂ ಯಾಚಿಸಬೇಕಾಯಿತು ಎಂದು ತಿಳಿದು ಬಂದಿದೆ. ತಮ್ಮ ರೆಸ್ಟಾರೆಂಟ್ ವಿವಿಧ ದೇಶಗಳು ಹಾಗೂ ರಾಜ್ಯಗಳ ಆಹಾರೋತ್ಸವವನ್ನು ಈ ಹಿಂದೆ ಆಯೋಜಿಸಿತ್ತು. ಈ ಉತ್ಸವಕ್ಕೆ ಹೋಟೆಲ್ ಸಿಬ್ಬಂದಿ ಆನ್ಲೈನ್ ಮೂಲಕ ಮಾಹಿತಿ ಸಂಗ್ರಹಿಸಿ ಖಾದ್ಯಗಳನ್ನು ಸಿದ್ಧಪಡಿಸಲಿದ್ದರು, ಪಾಕಿಸ್ತಾನದಿಂದ ಯಾವುದೇ ಬಾಣಸಿಗರನ್ನು ಕರೆಸುವ ಉದ್ದೇಶವಿರಲಿಲ್ಲ. ಪಾಕಿಸ್ತಾನಿ ಪದ ಕೆಲವರ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಆ ಪದ ಬಳಸುವುದಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News