ಮಂಗಳೂರು: ರಸ್ತೆ ಅಗಲೀಕರಣ ನಡೆಸದೆ ಕಾಂಕ್ರಿಟೀಕರಣಕ್ಕೆ ಡಿವೈಎಫ್‌ಐ ವಿರೋಧ
ಮಂಗಳೂರು, ಡಿ.14: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಡೀಲ್ ಬಜಾಲ್ ಮುಖ್ಯರಸ್ತೆ ರೈಲ್ವೆ ಸೇತುವೆ ಬಳಿಯಿಂದ ಜಲ್ಲಿಗುಡ್ಡೆ ಕ್ರಾಸ್‌ವರೆಗಿನ ಸುಮಾರು 500 ಮೀಟರ್ ರಸ್ತೆಯನ್ನು ಅಗಲೀಕರಣಗೊಳಿಸದೆ ಕಾಂಕ್ರಿಟೀಕರಣಗೊಳಿಸುವ ಪ್ರಕ್ರಿಯೆಗೆ ಡಿವೈಎಫ್‌ಐ ಬಜಾಲ್ ಘಟಕ ಹಾಗೂ ಸ್ಥಳೀಯ ಸಂಘಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದೆ
ಈಗಾಗಲೇ ಪಡೀಲ್‌ನಿಂದ ಬಜಾಲ್ವರೆಗಿನ ಮುಖ್ಯ ರಸ್ತೆಯ ಅಗಲೀಕರಣ, ಕಾಂಕ್ರಟೀಕರಣ ಕೆಲಸ ಬಹುತೇಕ ಪೂರ್ಣವಾಗಿದೆ. ಆದರೆ ರೈಲ್ವೆ ಸೇತುವೆ ಬಳಿಯಿಂದ ಜಲ್ಲಿಗುಡ್ಡೆ ಕ್ರಾಸ್‌ವರೆಗಿನ 500 ಮೀಟರ್‌ನಷ್ಟು ಜಾಗದಲ್ಲಿ ಅಗಲೀಕರಣಗೊಳ್ಳದೆ ಬಾಕಿಯಿರಿಸಲಾಗಿದೆ. ಇದಕ್ಕೆ ಆಡಳಿತ ಪಕ್ಷದ ಸ್ಥಳೀಯ ಪ್ರಭಾವಿಯೊಬ್ಬರು ಸ್ಥಳ ನೀಡದೆ ಇರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆಯಾಗಿದೆ. ಒಂದು ವೇಳೆ ರಸ್ತೆ ಅಗಲಗೊಳಿಸದೆ ಕಾಂಕ್ರಿಟೀಕರಣಗೊಳಿಸಿದರೆ ರಸ್ತೆ ಮತ್ತಷ್ಟು ಕಿರಿದಾಗಲಿದೆ. ಈಗಾಗಲೇ ಈ ರಸ್ತೆಯಲ್ಲಿ ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಮನಪಾ ಆಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಡಿವೈಎಫ್‌ಐ ಬಜಾಲ್ ಘಟಕದ ಅಧ್ಯಕ್ಷ ನೂರುದ್ದೀನ್, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ದೀಪಕ್, ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷ ಕೇಶವ ಭಂಡಾರಿ, ಕಾರ್ಯದರ್ಶಿ ಸುರೇಶ್ ಬಜಾಲ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.