ಮತಾಂತರ ನಿಷೇಧ ಕಾಯ್ದೆಗೆ ಸಿಪಿಎಂ ವಿರೋಧ
ಮಂಗಳೂರು, ಡಿ.14: ಮಿತಿಮೀರುತ್ತಿರುವ ಭ್ರಷ್ಟಾಚಾರ ಮತ್ತು ಕೋವಿಡ್ ಹಾಗೂ ಅತಿವೃಷ್ಠಿಯಿಂದ ತೀವ್ರ ಹಾನಿಗೀಡಾದ ಜನತೆಗೆ ಅಗತ್ಯ ನೆರವು ನೀಡದೆ ತನ್ನ ಹೊಣೆಗೇಡಿತವನ್ನು ಮುಚ್ಚಿಟ್ಟುಕೊಳ್ಳಲು ರಾಜ್ಯ ಸರಕಾರವು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ತಿಳಿಸಿದ್ದಾರೆ.
ಇದು ಸಂವಿಧಾನ ವಿರೋಧಿ ಕ್ರಮವಾಗಿದೆ. ರಾಜ್ಯದ ಜನತೆಯನ್ನು ವಂಚಿಸುವ ಮತ್ತು ಸದನದ ಸಮಯ ಹಾಗೂ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡುವ ಪ್ರಯತ್ನವಾಗಿದೆ. ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯದೆ ಕಾರ್ಪೊರೇಟ್ ಕಂಪೆನಿಗಳ ಗುಲಾಮಗಿರಿಯಿಂದ ಜನರ ಗಮನ ಬೇರೆಡೆ ಸೆಳೆಯುವ ಇಂತಹ ಕುತಂತ್ರಗಳಿಗೆ ಮುಂದಾಗಿದೆ ಎಂದು ಯಾದವ ಶೆಟ್ಟಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಮತಾಂಧರು ಮಸೀದಿ, ಚರ್ಚು ಹಾಗೂ ಧರ್ಮಗುರುಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳದ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವುದು ವಿಪರ್ಯಾಸ.ಬಹಿರಂಗವಾಗಿ ರಾಜ್ಯದ ರೈತರ ಕ್ಷಮೆಯಾಚಿಸಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020ಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.