ಚುನಾವಣಾ ಫಲಿತಾಂಶ ಬಿಜೆಪಿ ಆಡಳಿತ ವೈಫಲ್ಯಕ್ಕೆ ಸಾಕ್ಷಿ ; ಅಶೋಕ್ ಕುಮಾರ್ ಕೊಡವೂರು
ಉಡುಪಿ, ಡಿ.14: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 11 ಅಭ್ಯರ್ಥಿಗಳ ಗೆಲುವು ಆಡಳಿತಾರೂಢ ಬಿಜೆಪಿಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಹುಮತದ ಗೆಲುವಿಗೆ ದಿಕ್ಸೂಚಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ತಮ್ಮ ಪಕ್ಷದ ನಿರ್ಣಾಯಕ ಮತಗಳಿಗಿಂತಲೂ ಹೆಚ್ಚಿನ ಮತಗಳಿಸಿ ಆಯ್ಕೆಗೊಂಡಿರುವುದು ಈ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಪರಂಪರಾನುಗತ ಸಾಧನೆಯ ಗೆಲುವಾಗಿದೆ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮಂಜುನಾಥ ಭಂಡಾರಿ ಇವರ ಗೆಲುವಿಗೆ ಅವಿರತ ಶ್ರಮಿಸಿದ ಬ್ಲಾಕ್ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು, ಪಕ್ಷದ ಎಲ್ಲ ಮುಂಚೂಣಿ ಘಟಕಗಳ ಅಧ್ಯಕ್ಷರು, ಸರ್ವಸದಸ್ಯರು ಅಭಿನಂದನೀಯರು ಎಂದು ಅವರು ಹೇಳಿದ್ದಾರೆ.