ಶ್ರೀನಗರದ ಬಳಿ ಪೊಲೀಸ್ ಬಸ್ ಮೇಲಿನ ದಾಳಿ ಪೂರ್ವಯೋಜಿತವಾಗಿತ್ತು:ಐಜಿಪಿ

Update: 2021-12-14 15:10 GMT
ಸಾಂದರ್ಭಿಕ ಚಿತ್ರ

ಶ್ರೀನಗರ,ಡಿ.14: ಸಶಸ್ತ್ರ ಪೊಲೀಸ್ ತಂಡವು ತನ್ನ ಮಾಮೂಲು ಕರ್ತವ್ಯಗಳನ್ನು ಮುಗಿಸಿಕೊಂಡು ನಿತ್ಯದ ಸಮಯದಂತೆ ಶಿಬಿರಕ್ಕೆ ವಾಪಸಾಗುತ್ತಿದ್ದರಿಂದ ಸೋಮವಾರ ಸಂಜೆ ಶ್ರೀನಗರದ ಹೊರವಲಯದಲ್ಲಿ ಪೊಲೀಸ್ ಬಸ್ ಮೇಲೆ ನಡೆದಿದ್ದ ದಾಳಿಯು ಪೂರ್ವಯೋಜಿತವಾಗಿತ್ತು ಎಂದು ಐಜಿಪಿ (ಕಾಶ್ಮೀರ) ವಿಜಯ್ ಕುಮಾರ್ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈ ದಾಳಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದರು. 

ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯೋರ್ವರಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,25 ಪೊಲೀಸರನ್ನು ಹೊತ್ತಿದ್ದ ಬಸ್ ಎಂದಿನಂತೆ ಶಿಬಿರಕ್ಕೆ ವಾಪಸಾಗುತ್ತಿದ್ದಾಗ ಜೈಷೆ ಮುಹಮ್ಮದ್ ನ ಮೂವರು ಭಯೋತ್ಪಾದಕರು ಅದರ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಇದು ಪೂರ್ವಯೋಜಿತ ದಾಳಿಯಾಗಿದೆ. ಪೊಲೀಸರು ತಮ್ಮ ಕರ್ತವ್ಯಗಳನ್ನು ಪೂರೈಸಿದ ಬಳಿಕ ಬಸ್ ನಲ್ಲಿ ಅದೇ ದಾರಿಯಾಗಿ ಮರಳುತ್ತಿದ್ದನ್ನು ಅವರು ಖಂಡಿತವಾಗಿಯೂ ಗಮನಿಸಿದ್ದರು ಎಂದರು.
ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಎಎಸ್ಐ ಗುಲಾಂ ಹಸನ್ ಹಾಗೂ ಕಾನ್ ಸ್ಟೇಬಲ್ ಗಳಾದ ಶಫೀಕ್ ಅಲಿ ಮತ್ತು ರಮೀಝ್ ಬಾಬಾ ಅವರು ಮೃತಪಟ್ಟಿದ್ದರೆ,ಇತರ 11 ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News