ಬೆಳ್ತಂಗಡಿ: ವಿಕಲಚೇತನ ವ್ಯಕ್ತಿಗೆ ಪೊಲೀಸರಿಂದ ಹಲ್ಲೆ ಆರೋಪ; ದೂರು- ಪ್ರತಿದೂರು ದಾಖಲು

Update: 2021-12-14 15:58 GMT

ಬೆಳ್ತಂಗಡಿ: ಶಿಶಿಲ ಗ್ರಾಮದ ಕೊಳಕನ ಬಯಲು ಎಂಬಲ್ಲಿ ರಾತ್ರಿಯ ವೇಳೆ ಪೊಲೀಸರು ಮತ್ತು ಸ್ಥಳೀಯ ನಿವಾಸಿ ಗಿರೀಶ್ ಎಂಬವರ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು, ಇದೀಗ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದರೆ, ಹಲ್ಲೆಗೆ ಒಳಗಾಗಿದ್ದನೆನ್ನಲಾದ ವ್ಯಕ್ತಿ ಪೊಲೀಸರು ಮನೆಗೆ ನುಗ್ಗಿ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ.

ಶಿಶಿಲ ನಿವಾಸಿ ಗಿರೀಶ್ ಎಂಬವರು ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಿರೀಶ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಮನೆಗೆ ನುಗ್ಗಿ ಅಂಗವಿಕಲನಾದ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ.

ಶಿಶಿಲದಲ್ಲಿ ಎರಡು ಮನೆಯವರ ನಡುವೆ ಜಗಳ ನಡೆಯುತ್ತಿದ್ದ ಬಗ್ಗೆ 112 ನಂಬರಿಗೆ ಲೋಕೇಶ್ ಎಂಬಾತ ಕರೆ ಮಾಡಿದ್ದು, ಮಾಹಿತಿಯ ಮೇರೆಗೆ ಬೆಳ್ತಂಗಡಿ ಟ್ರಾಫಿಕ್ ಠಾಣೆಯ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪೊಲೀಸರು ನೀಡಿರುವ ದೂರಿನಲ್ಲಿ ತಾವು ಅಲ್ಲಿಗೆ ಹೋದಾಗ ಗಿರೀಶ್ ಕತ್ತಿ ಹಿಡಿದು ಗಲಾಟೆ ಮಾಡುತ್ತಿದ್ದ. ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಆತನ ಮೇಲೆ ಬಲ ಪ್ರಯೋಗ ಮಾಡಿ ಕತ್ತಿಯನ್ನು ತೆಗೆದುಕೊಳ್ಳುವಾಗ ಪೊಲೀಸರಿಗೂ ತರಚಿದ ಗಾಯಗಳಾಗಿವೆ ಎಂದು ದೂರು ನೀಡಲಾಗಿದ್ದು, ಈ ಬಗ್ಗೆ  ಪೊಲೀಸ್ ಶಾಂತಕುಮಾರ್ ಅವರು ನೀಡಿರುವ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಮನೆಯೊಳಗೆ ನುಗ್ಗಿ ಅಂಗವಿಕಲನಾದ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. 

ಆಸ್ಪತ್ರೆಗೆ ದಾಖಲಾಗಿರುವ ಗಿರೀಶ್ ಅವರನ್ನು ಭೇಟಿಯಾಗಿರುವ ಪೊಲೀಸ್ ಅಧಿಕಾರಿಗಳು ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ಗಿರೀಶ್ ಅವರ ಪತ್ನಿ ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ತಮಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ಖಂಡನೆ: ವಿಕಲಚೇತನ ದಲಿತ ಯುವಕನ ಮೇಲೆ ತುರ್ತು ಪೋಲಿಸ್ ವಾಹನದ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಘಟನೆಯನ್ನು ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಖಂಡಿಸಿದೆ.

ಶಿಶಿಲ ಗ್ರಾಮದ ಗಿರೀಶ್ ಎಂಬಾತನ ಮೇಲೆ ಪೋಲಿಸ್ ದೌರ್ಜನ್ಯ ಅತ್ಯಂತ ಅಮಾನವೀಯವಾದುದು ಎಂದು ಸಂಘದ ಅಧ್ಯಕ್ಷ ಪ್ರಭಾಕರ ಎಸ್ ಶಾಂತಿಕೋಡಿ ಹೇಳಿದ್ದಾರೆ.

ಆರೋಪಿತ ಪೋಲಿಸರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ತಕ್ಷಣ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ತಪ್ಪಿದಲ್ಲಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ 'ಧರ್ಮಸ್ಥಳ ಪೋಲಿಸ್ ಠಾಣೆ ಚಲೋ' ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.

ದ.ಸಂ.ಸ ಖಂಡನೆ

ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ , ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ , ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಲಾಯಿಲ, ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಗೋಡು, ಮಾಜಿ ಅಧ್ಯಕ್ಷ ಸೇಸಪ್ಪ ಅಳದಂಗಡಿ,  ದಲಿತ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ದಲಿತ ನಾಯಕರಾದ ಅನಂತ ಮುಂಡಾಜೆ, ಹರೀಶ್ ಕುಮಾರ್ ಎಲ್, ಸುಂದರ ಎಸ್ಎಂಟಿ ಸೇರಿದಂತೆ ಹಲವಾರು ದಲಿತ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಬೆಳ್ತಂಗಡಿ ತಾಲೂಕಿನ ಭೇಟಿಯಲ್ಲಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News