×
Ad

​ಮಂಗಳೂರು ವಿವಿ ಮಟ್ಟದ ಕಬ್ಬಡಿ: ಆಳ್ವಾಸ್ ವಲಯ ಚಾಂಪಿಯನ್

Update: 2021-12-14 21:29 IST

ಉಡುಪಿ, ಡಿ.14: ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ನಡೆದ ಮಂಗಳೂರು ವಿವಿ ಉಡುಪಿ ವಲಯ ಮಟ್ಟದ ಅಂತರ ಕಾಲೇಜು ಕಬಡ್ಡಿ ಟೂರ್ನಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಆತಿಥೇಯ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ತಂಡ ದ್ವಿತೀಯ ಸ್ಥಾನದೊಂದಿಗೆ ರನ್ನರ್‌ಅಪ್ ಪ್ರಶಸ್ತಿ ಪಡೆಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ ತೃತೀಯ ಸ್ಥಾನ ಗಳಿಸಿದರೆ, ಶ್ರೀ ಶಾರದಾ ಕಾಲೇಜು ಬಸ್ರೂರು ನಾಲ್ಕನೇ ಸ್ಥಾನ ಪಡೆಯಿತು.

ಈ ನಾಲ್ಕು ತಂಡಗಳು ಉಡುಪಿ ವಲಯದಿಂದ ಅಂತಿಮ ಸುತ್ತಿನ ಸ್ಪರ್ಧೆಗೆ ತೇರ್ಗಡೆಗೊಂಡವು. ಇಲ್ಲಿ ಒಟ್ಟು 26 ಕಾಲೇಜು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

ಟೂರ್ನಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣನಾಥ ಎಕ್ಕಾರು ವಹಿಸಿದ್ದರು. ಉದ್ಯಮಿ ಹರಿಯಪ್ಪ ಕೋಟ್ಯಾನ್, ಶಿಕ್ಷಣ ತಜ್ಞ ದಯಾನಂದ ಶೆಟ್ಟಿ ಕೊಜಕುಳಿ, ನಗರಸಭಾ ಸದಸ್ಯ ವಿಜಯ ಕೊಡವೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್ ರಾವ್ ಎಂ., ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಡಾ. ಹರಿದಾಸ ಕೂಳೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವೆಂಕಟೇಶ ಹೆಚ್.ಕೆ. ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್ ವಂದಿಸಿದರೆ, ತೇಜಸ್ ಬಂಗೇರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮರಾದ ಸೇನಾ ವರಿಷ್ಠ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News