×
Ad

ಉಪ್ಪಿನಂಗಡಿ: ಪ್ರತಿಭಟನೆಯ ವೇಳೆ ಪೊಲೀಸರಿಂದ ಲಾಠಿಚಾರ್ಜ್; ಹಲವು ಮಂದಿಗೆ ಗಂಭೀರ ಗಾಯ

Update: 2021-12-14 22:48 IST

ಉಪ್ಪಿನಂಗಡಿ, ಡಿ.14: ಇಲ್ಲಿನ ಹಳೆಗೇಟ್‌ನ ಸುಬ್ರಹ್ಮಣ್ಯ ಕ್ರಾಸ್ ಬಳಿ ಇತ್ತೀಚೆಗೆ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮೂವರು ಮುಖಂಡರನ್ನು ತನಿಖೆಗೆಂದು ಕರೆದು ಬಳಿಕ ಬಂಧಿಸಿದ್ದಾರೆಂದು ಆರೋಪಿಸಿ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರಿಂದ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಹಳೆಗೇಟ್ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಿಎಫ್‌ಐ ಉಪ್ಪಿನಂಗಡಿ ವಲಯ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಎಸ್‌ಡಿಪಿಐ ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷ ಝಕರಿಯ ಕೊಡಿಪ್ಪಾಡಿ ಹಾಗೂ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಫ ಲತೀಫಿ ಎಂಬವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸುದ್ದಿ ತಿಳಿದು ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಬೆಳಗ್ಗೆಯೇ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪೊಲೀಸ್ ವಶದಲ್ಲಿದ್ದವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು. ಸಂಜೆಯವರೆಗೂ ಪ್ರತಿಭಟನೆ ಮುಂದುವರಿದಾಗ ಡಿವೈಎಸ್ಪಿ ಡಾ. ಗಾನಾ ಕುಮಾರಿ ಸ್ಥಳಕ್ಕಾಗಮಿಸಿ ಪ್ರತಿಭಟನಾನಿರತ ನಾಲ್ಕೈದು ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದರಲ್ಲದೆ ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದರು. ಅದರಂತೆ ಪ್ರತಿಟನಕಾರರು ಸ್ಥಳದಿಂದ ನಿರ್ಗಮಿಸಿದರು ಎಂದು ತಿಳಿದು ಬಂದಿದೆ.

ಮುಂದುವರಿದ ಪ್ರತಿಭಟನೆ, ಲಾಠಿಚಾಜ್:
ಸಂಜೆ ವೇಳೆ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಮೂವರು ಪಿಎಫ್‌ಐ ಮುಖಂಡರ ಪೈಕಿ ಓರ್ವನನ್ನು ಮಾತ್ರ ಬಿಡುಗಡೆಗೊಳಿಸಿದರು. ಇದು ತಿಳಿಯುತ್ತಿದ್ದಂತೆ ಮತ್ತೆ ಠಾಣೆಯೆದುರು ಜಮಾಯಿಸಿದ ಪಿಎಫ್‌ಐ ಕಾರ್ಯಕರ್ತರು ಪೊಲೀಸ್ ವಶದಲ್ಲಿರುವ ಉಳಿದಿಬ್ಬರನ್ನೂ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ರಾತ್ರಿಯೂ ಪ್ರತಿಭಟನೆ ಮುಂದುವರಿದಿತ್ತು. 9 ಗಂಟೆ ಸುಮಾರಿಗೆ ಪ್ರತಿಭಟನಾಕಾರರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಇದರಿಂದ 10ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮೂವರು ಪೊಲೀಸರೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಂಜೆ ವೇಳೆ ಸ್ಥಳಕ್ಕಾಗಮಿಸಿದ್ದ ಪುತ್ತೂರು ತಹಶೀಲ್ದಾರ್ ಟಿ.ರಮೇಶ್ ಬಾಬು 144 ಸೆಕ್ಷನ್ ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಬಳಿಕವೂ ಪ್ರತಿಭಟನೆ ಮುಂದುವರಿಸಿದ್ದರಿಂದ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಉಪ್ಪಿನಂಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ರಾಜ್ಯ ಹಾಗೂ ದ.ಕ. ಜಿಲ್ಲಾ ಮೀಸಲು ಪೊಲೀಸ್ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ.

ಪಿಎಫ್ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಖಂಡನೆ:

"ಉಪ್ಪಿನಂಗಡಿ ಪೊಲೀಸರು ರಾತೋರಾತ್ರಿ ಅಮಾಯಕರನ್ನು ಬಂಧಿಸಿದ್ದಲ್ಲದೇ, ಬಂಧಿತರ ಬಿಡುಗಡೆಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ‌ ಮೇಲೆ ಬರ್ಬರವಾಗಿ ಲಾಠಿಚಾರ್ಜ್ ನಡೆಸಿದ್ದಾರೆ. ಪ್ರತಿಭಟನಕಾರರ ಮೇಲೆ ದಬ್ಬಾಳಿಕೆ ನಡೆಸಿದ ಪೊಲೀಸರ ಕ್ರೌರ್ಯವನ್ನು ನಾಗರಿಕ ಸಮುದಾಯ ಒಂದಾಗಿ ಖಂಡಿಸಬೇಕು. ಇದು ನ್ಯಾಯಕ್ಕಾಗಿ ಎದ್ದು ನಿಲ್ಲಬೇಕಾದ ಸಮಯ" ಎಂದು ಯಾಸಿರ್ ಹಸನ್ ಟ್ವೀಟ್ ಮಾಡಿದ್ದಾರೆ.

"ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಯುತ್ತಿದ್ದು, ಆ ಮೂಲಕ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಮಾತ್ರವಲ್ಲದೆ ಇಂತಹ ಬೆಳವಣಿಗೆ ಖಂಡನೀಯವಾಗಿದೆ"

- ಅಮೀನ್ ಅಹ್ಸನ್, ದ.ಕ.ಜಿಲ್ಲಾ ಸಂಚಾಲಕ, ಜಮಾಅತೆ ಇಸ್ಲಾಮೀ ಹಿಂದ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News