ಶೇ.98ರಷ್ಟು ಅಫ್ಘಾನ್ ಪ್ರಜೆಗಳಿಗೆ ಉಣ್ಣಲು ಸಾಕಷ್ಟು ಆಹಾರ ಲಭ್ಯವಿಲ್ಲ: ಡಬ್ಲುಎಫ್ಪಿ ವರದಿ ಕಳವಳ

Update: 2021-12-14 17:31 GMT
File Photo | PTI

ಜಿನೇವಾ,ಡಿ.14: ಅಫ್ಘಾನಿಸ್ತಾನದ ಬಹುತೇಕ ಪ್ರಜೆಗಳಿಗೆ ಉಣ್ಣಲು ಸಾಕಷ್ಟು ಆಹಾರ ದೊರೆಯುತ್ತಿಲ್ಲ ಹಾಗೂ ವಿಫಲವಾಗಿರುವ ಆರ್ಥಿಕತೆಯಿಂದಾಗಿ ತಾಲಿಬಾನ್ ಆಡಳಿತದ ಆ ದೇಶವು ವಿನಾಶಕಾರಿ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮ (ಡಬ್ಲು ಎಫ್‌ಪಿ) ಮಂಗಳವಾರ ತಿಳಿಸಿದೆ.

ಅಂದಾಜು ಶೇ.98ರಷ್ಟು ಅಫ್ಘಾನ್ ಪ್ರಜೆಗಳಿಗೆ ಉಣ್ಣಲು ಸಾಕಷ್ಟು ಆಹಾರ ದೊರೆಯುತ್ತಿಲ್ಲವೆಂದು ಡಬ್ಲುಎಫ್‌ಪಿ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಪ್ರತಿ 10 ಅಫ್ಘನ್ ಕುಟುಂಬಗಳ ಪೈಕಿ 7 ಕುಟುಂಬಗಳು ಸಾಲ ಮಾಡಿ ಆಹಾರವನ್ನು ಪಡೆಯುತ್ತಿದ್ದು, ಇದು ಅವರನ್ನು ಕಡುಬಡತನದ ಅಂಚಿಗೆ ದೂಡಿದೆ ಎಂದು ಡಬ್ಲುಎಫ್‌ಪಿ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.


ಅಫ್ಘಾನ್‌ಗೆ ದೊರೆಯುತ್ತಿದ್ದ ವಿದೇಶಿ ನೆರವನ್ನು ಆಗಸ್ಟ್ ತಿಂಗಳ ಮಧ್ಯದಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಏಕಾಏಕಿಯಾಗಿ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಆಫ್ಘಾನಿಸ್ತಾನದ ಶಿಥಿಲಗೊಂಡ ಪತನದ ಅಂಚಿಗೆ ತಳ್ಳಿತ್ತು. ಆಹಾರ, ಇಂಧನ ಹಾಗೂ ಇತರ ದಿನಬಳಕೆಯ ಅಹಾರವಸ್ತುಗಳು ಜನಸಾಮಾನ್ಯರ ಕೈಗೆ ಎಟುಕದಷ್ಟು ದುಬಾರಿಯಾಗಿವೆ.
  
ಅಫ್ಘಾನಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನ ಉಲ್ಬಣ, ಸಂಘರ್ಷ ಹಾಗೂ ಬರಗಾಲದಿಂದಾಗಿ ಸಾಮಾನ್ಯ ಕುಟುಂಬಗಳಿಗೆ ಸಂಭಾಳಿಸಿಕೊಳ್ಳಲು ಕಷ್ಟಕರವಾದವಂತಹ ಪರಿಸ್ಥಿತಿಯುಂಟಾಗಿದೆ ಎಂದು ಡಬ್ಲುಎಫ್‌ಪಿ  ವಕ್ತಾರೆ ಟಾಮ್ಸನ್ ಫಿರಿ ತಿಳಿಸಿದ್ದಾರೆ.
  
2021ರಲ್ಲಿ ಡಬ್ಲುಎಫ್ಪಿಯು 1.50 ಕೋಟಿ ಅಫ್ಘಾನ್ ಪ್ರಜೆಗಳಿಗೆ ಆಹಾರದ ನೆರವನ್ನು ಒದಗಿಸಿದ್ದು, ಈ ಪೈಕಿ 70 ಲಕ್ಷ ಮಂದಿಗೆ ನವೆಂಬರ್ ತಿಂಗಳೊಂದರಲ್ಲೇ ನೀಡಲಾಗಿದೆ. ಮುಂದಿನ ವರ್ಷ ಅಫ್ಘಾನಿಸ್ತಾನಾದ್ಯಂತದ ಪ್ರಾಂತಗಳ 2.30 ಕೋಟಿ ಜನರಿಗೆ ನೆರವನ್ನು ಒದಗಿಸುವ ಯೋಜನೆಯನ್ನು ಹೊಂದಿದೆ.
  
 ನಾವು ಯಾವುದೇ ಕ್ಷಣವನ್ನು ವ್ಯರ್ಥ ಮಾಡಲು ಸಾಧ್ಯವಿಲ್ಲ. '' ಅಫ್ಘಾನಿಸ್ತಾನದಲ್ಲಿನ ನಮ್ಮ ನಿರ್ದೇಶಕರು ಪರಿಸ್ಥಿತಿಯು ಅತ್ಯಂತ ಭೀಕರವಾಗಿದೆ ಎಂದು ಫಿರಿ ಹೇಳಿದರು. ಅದೊಂದು ಹಸಿವು ಹಾಗೂ ನಿರ್ಗತಿಕತನದ ಹಿಮಪಾತವಾಗಿದೆ ಎಂದರು. ಅಫ್ಘಾನಿಸ್ತಾನದಲ್ಲಿ ತಾಂಡವವಾಡುತ್ತಿರುವ ತೀವ್ರವಾದ ಹಸಿವು ಹಾಗೂ ಬಡತನದಿದಾಗಿ ಹಲವರು ಅಫ್ಘನ್ನರು ಬಾಲ ಕಾರ್ಮಿಕತನ, ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಹಾಗೂ ಮಕ್ಕಳ ಮಾರಾಟದಂತಹ ಹತಾಶೆಯ ಕೃತ್ಯಗಳತ್ತ ತಳ್ಳಲ್ಪಟ್ಟಿದ್ದಾರೆಂದು ವಿಶ್ವಸಂಸ್ತೆಯಲ್ಲಿನ ಮಾನವಹಕ್ಕುಗಳ ಉಪ ಹೈಕಮೀಶನರ್ ನದಾ ಅಲ್ ನಶೀಫ್ ಪ್ರತ್ಯೇಕ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ನೂತನ ತಾಲಿಬಾನ್ ಆಡಳಿತಗಾರರು, ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗವಕಾಶಗಳನ್ನು ಒದಗಿಸಲು ತಾತ್ವಿಕವಾಗಿ ಬದ್ಧರಾಗಿದ್ದೇವೆಂದು ಘೋಷಿಸಿದ್ದಾರೆ. ಆಹಾರ ಹಾಗೂ ವೈದ್ಯಕೀಯ ನೆರವಿನ ಕೊರತೆಗಾಗಿ ಹಾತೊರೆಯುತ್ತಿರುವ ಕೋಟ್ಯಂತರ ಅಫ್ಘನ್ನರಿಗೆ ಅನುಕಂಪ ಹಾಗೂ ಕೃಪೆಯನ್ನು ತೋರುವಂತೆ ಅವರು ಜಗತ್ತಿನ ರಾಷ್ಟ್ರಗಳನ್ನು ಕೋರಿದ್ದಾರೆ.
  
ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಾಕಿ ಅವರು ರಮಿವಾರ ಎಎಫ್ಪಿ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ, ತಾಲಿಬಾನ್ ಸರಕಾರವು ಎಲ್ಲಾ ದೇಶಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತದೆ. ಅದಕ್ಕೆ ಅಮೆರಿಕದ ಜೊತೆ ಯಾವುದೇ ವಿವಾದವಿಲ್ಲ. ಆಗಸ್ಟ್ 15ರಂದು ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಅಮೆರಿಕವು ಸ್ತಂಭನಗೊಳಿಸಿರುವ 10 ಶತಕೋಟಿ ಡಾಲರ್ ಮೊತ್ತದ ನಿಧಿಗಳನ್ನು ಬಿಡುಗಡೆಗೊಳಿಸುವಂತೆ ಅವರು ವಾಶಿಂಗ್ಟನ್ ಮತ್ತಿತರ ರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ.

''ಅಫ್ಘಾನಿಸ್ತಾನದ ವಿರುದ್ಧ ನಿರ್ಬಂಧಗಳನ್ನು ಹೇರುವುದರಿಂದ ಯಾವುದೇ ಪ್ರಯೋಜನವಿಲ್ಲ'' ಎಂದು ಮುತ್ತಾಕಿ ರವಿವಾರ ಕಾಬೂಲ್ನಲ್ಲಿರುವ ವಿದೇಶಾಂಗ ಸಚಿವಾಲಯದ ಕಟ್ಟಡದಲ್ಲಿ, ಪಶ್ತೂ ಭಾಷೆಯಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
 
'' ಅಫ್ಘಾನಿಸ್ತಾನವನ್ನು ಅಸ್ಥಿರಗೊಳಿಸುವುದು ಅಥವಾ ಅಫ್ಘಾನ್ ಸರಕಾರವನ್ನು ದುರ್ಬಲಗೊಳಿಸುವುದು ಯಾರ ಹಿತಾಸಕ್ತಿಗೂ ಒಳಿತಲ್ಲ'' ಎಂದು ಮುತ್ತಾಕಿ ತಿಳಿಸಿದರು. ಸೋಮವಾರ ಅಮೆರಿಕದ ಪತ್ರಿಕಾ ಕಾರ್ಯದರ್ಶಿ ಜೆನ್ ಫ್ಸಾಕಿ ಅವರು ಸೋಮವಾರ ಶ್ವೇತಭವನದಲ್ಲಿ ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ತಾಲಿಬಾನ್ಗೆ ಹಣಕಾಸು ನಿಧಿಯ ದೊರೆಯದೆ ಇರುವುದನ್ನು ಮುಂದುವರಿಸಲಾಗುತ್ತದೆ ಎಂದು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News