×
Ad

ನಳಿನ್‌ಗೆ ಜನ ಓಟು ಕೊಟ್ಟಿರುವುದು ಸಿದ್ದರಾಮಯ್ಯರ ಮಾತಿಗೆ ಉತ್ತರ ಕೊಡುವುದಕ್ಕಲ್ಲ: ಬಿ.ಎಲ್.ಸಂತೋಷ್

Update: 2021-12-15 13:42 IST

ಉಡುಪಿ, ಡಿ.15: ಸಿದ್ದರಾಮಯ್ಯನವರ ಮಾತಿಗೆ ಉತ್ತರ ಕೊಡಲು ಜನ ನಮ್ಮನ್ನು ಆಯ್ಕೆ ಮಾಡಿರುವುದಲ್ಲ. ಜನ ಆಯ್ಕೆ ಮಾಡಿರುವುದು ಅವರು 60-70 ವರ್ಷಗಳಿಂದ ಏನು ಮಾಡಿಲ್ಲ. ನೀವು ಏನಾದರೂ ಮಾಡಿ ತೋರಿಸಿ ಅಂತ. ಅದು ಬಿಟ್ಟು ಇವರ ಮಾತಿಗೆ ಉತ್ತರ ಕೊಡುವುದಕ್ಕೆ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

ಉಡುಪಿ ಅಜ್ಜರಕಾಡು ಪುರಭವನದಲ್ಲಿ ಬುಧವಾರ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ಸಿದ್ದರಾಮಯ್ಯ ಮಾತನಾಡಿದ ಕೂಡಲೇ ನಳಿನ್ ಕುಮಾರ್ ಕಟೀಲು ಅದಕ್ಕೆ ಉತ್ತರ ಕೊಡುತ್ತಾರೆ. ನಳಿನ್ ಕುಮಾರ್‌ಗೆ ಓಟು ಕೊಟ್ಟಿರುವುದು ಸಿದ್ದರಾಮಯ್ಯಗೆ ಉತ್ತರ ಕೊಡಲು ಅಲ್ಲ. ನಳಿನ್, ಬೊಮ್ಮಾಯಿ, ಸುನೀಲ್ ಕುಮಾರ್‌ಗೆ ಮತ ಹಾಕಿರುವುದು ಸಿದ್ದರಾಮಯ್ಯನವರು ಇಷ್ಟು ವರ್ಷ ಏನು ಮಾಡಿ ತೋರಿಸಿಲ್ಲ. ನೀವು ಏನಾದರೂ ಮಾಡಿ ತೋರಿಸಿ ಅಂತ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಸ್ವಲ್ಪ ದಿನ ಆರೆಸ್ಸೆಸ್‌ಗೆ ಬೈದು ನಂತರ ಮರೆತು ಹೋಗುತ್ತಾರೆ. ನೀವು ಇಂತಹದಕ್ಕೆಲ್ಲ ಉತ್ತರ ಕೊಡಬೇಕೇ ಎಂಬುದನ್ನು ಯೋಚನೆ ಮಾಡಿ. ಮೇಲ್ಸೇತುವೆಗೆ ಸಾರ್ವಕರ್ ಹೆಸರು ಇಟ್ಟರೆ ಬದುಕಿಗೆ ಬೆಂಕಿ ಬಿದ್ದ ರೀತಿಯಲ್ಲಿ ಹಾರಾಡಿದ ಸಿದ್ದರಾಮಯ್ಯಗೆ ಉತ್ತರ ಕೊಡಬೇಕೆ ಅಥವಾ ಸಾರ್ವಕರ್‌ನ ಬದುಕನ್ನು ಪ್ರತಿ ಯುವಜನತೆಯ ಮನಸ್ಸಿಗೆ ತಲುಪಿಸಬೇಕೆ ಎಂಬುದನ್ನು ಯೋಚಿಸಬೇಕು. ಸಿದ್ದರಾಮಯ್ಯ ಈಗಾಗಲೇ ಕಸದ ಬುಟ್ಟಿಯಲ್ಲಿದ್ದಾರೆ. ಮುಂದೆ ದೊಡ್ಡ ಕಸದ ಬುಟ್ಟಿಗೆ ಹೋಗುತ್ತಾರೆ. ನಾವು ಯಾಕೆ ಅದಕ್ಕೆ ಪೈಪೋಟಿ ಕೊಡಬೇಕು. ಇಂದು ಜನ ನಮ್ಮನ್ನು ಸ್ವೀಕಾರ ಮಾಡುತ್ತಿದ್ದಾರೆ ಎಂದರು.

ಜನಪ್ರತಿನಿಧಿಗಳನ್ನು ಜನ ಕೇವಲ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸುವುದಲ್ಲ, ಕಳುಹಿಸಿದವರು ಸರಿ ಇರಬೇಕು. ಅವರು ಅಲ್ಲಿ ಸಮಾಜ ಪರಿವರ್ತನೆ ಆಗುವ ನಿಟ್ಟಿನಲ್ಲಿ ಏನು ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಮಂಗಳೂರು ಪ್ರಭಾರಿ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News