ಉಡುಪಿ: ಉಪ್ಪಿನಂಗಡಿ ಲಾಠಿಚಾರ್ಚ್ ಖಂಡಿಸಿ ಪಿಎಫ್‌ಐ ಪ್ರತಿಭಟನೆ
ಉಡುಪಿ, ಡಿ.15: ಉಪ್ಪಿನಂಗಡಿಯಲ್ಲಿ ಶಾಂತಿಯುತ ಪ್ರತಿಭಟನನಿರತ ಮೇಲೆ ನಡೆದ ಪೊಲೀಸ್ ಲಾಠಿ ಚಾರ್ಚ್ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಬುಧವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಾಹೀದ್ ಅಲಿ, ಉಪ್ಪಿನಂಗಡಿಯಲ್ಲಿನ ಘಟನೆ ಸಂಘಪರಿವಾರದ ಪಿತೂರಿಯಾಗಿದೆ. ಇದು ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷ ಭಾವನೆ ಕೆರಳಿಸುವ ಸಂಘಪರಿವಾರದ ಅಜೆಂಡಾದ ಭಾಗವಾಗಿದೆ. ಬಿಜೆಪಿ ಸರಕಾರ ಉತ್ತರ ಪ್ರದೇಶದಂತೆ ಕರ್ನಾಟಕ ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದೆ. ಇದಕ್ಕೆ ಗೃಹ ಸಚಿವರು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಎಪಿಸಿಆರ್‌ನ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಮಾತನಾಡಿ, ಸಂವಿಧಾನ ವಿರೋಧಿ ಘೋಷಣೆ ಹಾಗೂ ಚಟುವಟಿಕೆ ಇಲ್ಲದೆ ಶಾಂತಿಯುತ ವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ. ಈ ಲಾಠಿಯ ಹಿಂದೆ ನಮ್ಮನ್ನಾಳುವ ಫ್ಯಾಸ್ಟಿಸ್ಟ್ ಸರಕಾರದ ಹುನ್ನಾರ ಅಡಗಿದೆ. ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡ ಬೇಕಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ಫಯಾಝ್ ಅಹ್ಮದ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಇಮಾಮ್ ಕೌನ್ಸಿಲ್‌ನ ಜಿಲ್ಲಾ ಸಮಿತಿ ಸದಸ್ಯ ಮೌಲಾನ ಜಾವೇದ್ ಖಾಸ್ಮಿ, ಪಿಎಫ್‌ಐ ಕಾರ್ಯದರ್ಶಿ ಶುಕೂರು ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು. ಶಫೀಕ್ ಕಾರ್ಯಕ್ರಮ ನಿರೂಪಿಸಿದರು.