ಮತಾಂತರ ನಿಷೇಧ ಮಸೂದೆ ವಿರೋಧಿಸಿ ಸಾಲಿಡಾರಿಟಿ ಮನವಿ
ಉಡುಪಿ, ಡಿ.15: ರಾಜ್ಯ ಸರಕಾರ ಈ ಬಾರಿಯ ಚಳಿಗಾಲದ ಅಧಿವೇಶನ ದಲ್ಲಿ ಮಂಡಿಸಲು ಮುಂದಾಗಿರುವ ಸಂವಿಧಾನ ಬಾಹಿರವಾದ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸಿ ಸಾಲಿಡಾರಿಟಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಬುಧವಾರ ಉಡುಪಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಮಸೂದೆಯು ರಾಜ್ಯದ ವಿವಿಧ ಧಾರ್ಮಿಕ ಮತ್ತು ಸಂಸ್ಕೃತಿಗಳ ಮಧ್ಯೆ ಇರುವ ಸಾಮರಸ್ಯವನ್ನು ಬುಡಮೇಲು ಗೊಳಿಸುವುದಲ್ಲದೆ ಈ ರಾಜ್ಯದ ಸೌಹಾರ್ದ ಪರಂಪರೆಗೂ ಅಪಾಯಕಾರಿ. ಈ ಮಸೂದೆಯು ಕೋಮುವಾದಿ ಗೂಂಡಾಗಳಿಗೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಸರಕಾರವೇ ಮುಕ್ತ ಪರವಾನಗಿ ನೀಡಿದಂಾಗುತ್ತದೆ ಎಂದು ಸಾಲಿಡಾರಿಟಿ ಹೇಳಿದೆ.
ಆದುದರಿಂದ ಸರಕಾರವು ಸಂವಿಧಾನ ವಿರೋಧಿಯಾದ ಮತಾಂತರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಕೈಬಿಡಬೇಕು. ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಸೂಕ್ತ ಭದ್ರತೆ ಯನ್ನು ಒದಗಿಸಬೇಕು. ಪ್ರಾರ್ಥನಾ ಮಂದಿರಗಳಿಗೆ ಹಾನಿಯಾಗಿದ್ದು ಸರಕಾರವು ಸೂಕ್ತ ಪರಿಹಾರವನ್ನು ಬಿಡುಗಡೆಗೊಳಿಸಬೇಕು. ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತ ದಾಳಿ ನಡೆಸುವ ಗೂಂಡಾಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಲಿಡಾರಿಟಿ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಾಲಿಡಾರಿಟಿ ಜಿಲ್ಲಾ ಸಂಚಾಲಕ ಯಾಸೀನ್ ಕೋಡಿ ಬೆಂಗ್ರೆ, ಕಾರ್ಯದರ್ಶಿ ಝಕ್ರಿಯಾ ನೇಜಾರ್, ಪರ್ವೆಝ್ ಉಡುಪಿ, ಇಬ್ರಾಹಿಮ್ ಸಯೀದ್, ಝುಬೇರ್ ಮಲ್ಪೆಮತ್ತು ಎಪಿಸಿಆರ್‌ನ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.