×
Ad

ಸಂವಿಧಾನಕ್ಕೆ ಬದ್ಧರಾಗಿ ಪೊಲೀಸರು ಕಾರ್ಯ ನಿರ್ವಹಿಸಬೇಕು: ರಿಯಾಝ್ ಫರಂಗಿಪೇಟೆ

Update: 2021-12-15 22:29 IST

ಬಂಟ್ವಾಳ, ಡಿ.15: ಜನರ ತೆರಿಗೆಯಿಂದ ಸಂಬಳ ಪಡೆಯುವ ಪೊಲೀಸರು ಸಂವಿಧಾನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕೆ ಹೊರೆತು ಬಿಜೆಪಿ, ಸಂಘಪರಿವಾರದ ಒತ್ತಡಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದನ್ನು ನಿಲ್ಲಿಸಬೇಕು ಎಂದು ಎಸ್.ಡಿ.ಪಿ.ಐ. ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದರು.

ಉಪ್ಪಿನಂಗಡಿಯಲ್ಲಿ ಪಿ.ಎಫ್.ಐ. ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದನ್ನು ಖಂಡಿಸಿ ಬುಧವಾರ ಸಂಜೆ ಬಿ.ಸಿ.ರೋಡ್ ಕೈಕಂಬದಲ್ಲಿ ಬಂಟ್ವಾಳ ಪಿ.ಎಫ್.ಐ.ಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನ್ಯಾಯ ಕೇಳಿ ಪ್ರತಿಭಟನೆ ಮಾಡುವವರ ಮೇಲೆ ಲಾಠಿ ಚಾರ್ಜ್ ಮಾಡಿದರೆ ಹೋರಾಟ ನಿಲ್ಲದು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಏಕಾಏಕಿ ಲಾಠಿ ಚಾರ್ಜ್ ಮಾಡಿದ ಪೊಲೀಸರಿಗೆ ಕಾನೂನು ಹೋರಾಟದ ಮೂಲಕ ಉತ್ತರ ನೀಡುತ್ತೇವೆ. ನೈಜ್ಯ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಸಾಧ್ಯವಾಗದ ಪೊಲೀಸರು, ಅಮಾಯಕರನ್ನು ಬಂಧಿಸಿ ಬಿಜೆಪಿ ಮತ್ತು ಸಂಘಪರಿವಾರವನ್ನು ಖುಷಿ ಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಲಾಠಿ ಚಾರ್ಜ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ರಾಕ್ಷಸತನ ಮೆರೆದ ಪೊಲೀಸರನ್ನು ಮನೆಗೆ ಕಳುಹಿಸುತ್ತೇವೆ. ಉಪ್ಪಿನಂಗಡಿ ಘಟನೆಯನ್ನು ಖಂಡಿಸಿ ಡಿ.17ರಂದು ಎಸ್ಪಿ ಕಚೇರಿಕೆ ಚಲೋ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಬಂಟ್ವಾಳ ಪಿ.ಎಫ್.ಐ. ಕಾರ್ಯದರ್ಶಿ ರಹ್ಮಾನ್ ಗೂಡಿನಬಳಿ, ಜಿಲ್ಲಾ ಸಮಿತಿ ಸದಸ್ಯ ಶಬೀರ್ ಶಾಂತಿಅಂಗಡಿ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News