×
Ad

ಅಂತಃಕರಣದ ಎಚ್ಚರ ಆಲಿಸಿದರೆ ಎಡವಲು ಸಾಧ್ಯವಿಲ್ಲ : ವಂ. ರುಡೋಲ್ಫ್ ರವಿ ಡೇಸಾ

Update: 2021-12-16 15:01 IST

ಮಂಗಳೂರು, ಡಿ.16: ಪ್ರತಿಯೊಬ್ಬ ವ್ಯಕ್ತಿಯ ಅಂತಃಕರಣ ಸರಿ-ತಪ್ಪುಗಳನ್ನು ಪ್ರಾಮಾಣಿಕವಾಗಿ ಹೇಳುತ್ತದೆ. ಅಂತಃಕರಣದ ಎಚ್ಚರ ಪಾಲಿಸಿದರೆ ಜೀವನದಲ್ಲಿ ಎಡವಲು ಸಾಧ್ಯವಿಲ್ಲ ಎಂದು ನಗರದ ಫಾದರ್ ಮ್ಲುಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವಂ. ರುಡೋಲ್ಫ್ ರವಿ ಡೇಸಾ ಅಭಿಪ್ರಾಯಿಸಿದರು.

ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಗುರುವಾರ ನಡೆದ ರೌಡಿಶೀಟರ್‌ಗಳ ‘ಪರಿವರ್ತನಾ ಸಭೆ’ಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಜೀವನ ರೂಪಿಸುವುದು ನಮ್ಮ ಕೈಯಲ್ಲಿದ್ದು ಯಾರ ಪ್ರಭಾವಕ್ಕೂ ಮಣಿಯಬೇಡಿ. ತುಳುನಾಡಿನ ಈ ಪುಣ್ಯಭೂಮಿ ಶಾಂತಿ, ಪ್ರೀತಿ, ಸೌಹಾರ್ದತೆ, ಸಾಮರಸ್ಯಕ್ಕೆ ಹೆಸರುವಾಸಿ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಅಶಾಂತಿಯತ್ತ ವಾಲುತ್ತಿರುವುದು ಖೇದಕರ. ಹಿಂಸೆಯಿಂದ ಹಿಂಸೆ, ಬೆಂಕಿಯಿಂದ ಬೆಂಕಿ, ವೈರತ್ವದಿಂದ ವೈರತ್ವ ನಾಶ ಮಾಡಲು ಸಾಧ್ಯವಿಲ್ಲ. ಗೆಳೆತನ ಮಾತ್ರ ವೈರತ್ವವನ್ನು ನಾಶಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.

ಪರಿವರ್ತನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಮತ್ತು ಯುನಿಟಿ ಆಸ್ಪತ್ರೆ ಛೇರ್‌ಮ್ಯಾನ್ ಡಾ.ಸಿ.ಪಿ. ಹಬೀಬ್ ರೆಹಮಾನ್ ಮಾತನಾಡಿ, ಕಳೆದುಹೋದ ದಿನಗಳ ಬಗ್ಗೆ ಚಿಂತೆ ಬೇಡ, ರೌಡಿ ಶೀಟರ್ ತೆರವಾದ ಎಲ್ಲರೂ ಉತ್ತಮ ನಾಗರಿಕರಾಗಿ ಬದುಕಿ ಕುಟುಂಬದ ಬಾಳು ಬೆಳಗಬೇಕಿದೆ. ಇದರಿಂದ ಸಮಾಜದಲ್ಲಿ ಉತ್ತಮ ಗೌರವ ಸಂಪಾದಿಸಲು ಸಾಧ್ಯ ಎಂದರು.

ನಗರ ಕಾನೂನು ಸುವ್ಯವಸ್ಥಾ ವಿಭಾಗ ಪೊಲೀಸ್ ಉಪ ಆಯುಕ್ತ ಹರಿರಾಂ ಶಂಕರ್, ಸಂಚಾರ ಮತ್ತು ಅಪರಾಧ ವಿಭಾಗದ ಪೊಲೀಸ್ ಉಪ ಆಯುಕ್ತ ಪಿ. ದಿನೇಶ್ ಕುಮಾರ್, ಮಂಗಳೂರು ದಕ್ಷಿಣ ಉಪವಿಭಾಗ ಪೊಲೀಸ್ ಸಹಾಯಕ ಆಯುಕ್ತ ರಂಜಿತ್ ಬಂಡಾರು ಉಪಸ್ಥಿತರಿದ್ದರು.

ಬರ್ಕೆ ಠಾಣೆ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ್ ಪ್ರಾರ್ಥಿಸಿದರು. ಎಸಿಪಿ ನಟರಾಜ್ ಶುಭ ಸಂದೇಶ ನೀಡಿದರು. ರೌಡಿಶೀಟರ್ ತೆರವಾದ ಲೋಹಿತ್ ಸುವರ್ಣ, ಶಿವರಾಮ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ನಮೃತಾ ಕಾರ್ಯಕ್ರಮ ನಿರೂಪಿಸಿದರು.

''ಕಮಿಷನರೇಟ್ ವ್ಯಾಪ್ತಿಯ 3263 ರೌಡಿಶೀಟರ್‌ಗಳಲ್ಲಿ 1256 ಮಂದಿ ರೌಡಿಶೀಟ್ ತೆರವು ಮಾಡಲಾಗಿದೆ. ಅವರಲ್ಲಿ  80 ಮಂದಿ ವಯಸ್ಸಾದವರಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ಮುಕ್ತವಾದ ರೌಡಿಗಳ ಸಂಖ್ಯೆ 663, ಚಟುವಟಿಕೆಯಲ್ಲಿ ಇಲ್ಲದೆ ಇರುವವರು 523. ಸುಮಾರು 5ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷಗಳಿಂದ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಉತ್ತಮ ಜೀವನ ನಡೆಸುವವರನ್ನು ಪರಿಗಣಿಸಿ ರೌಡಿಶೀಟರ್ ತೆರವು ಮಾಡಲಾಗಿದೆ. ಈ ಪರಿಶೀಲನಾ ಕಾರ್ಯಕ್ಕೆ ಕಮಿಷನರ್ ವ್ಯಾಪ್ತಿಯ ಅಧಿಕಾರಿಗಳು 3 ತಿಂಗಳಿನಿಂದ ಶ್ರಮಿಸಿದ್ದಾರೆ''.

- ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News