×
Ad

ಉಡುಪಿ: ಕೇಂದ್ರದ ವಿರುದ್ಧ ಬ್ಯಾಂಕ್ ಯೂನಿಯನ್‌ಗಳ ಸಾರ್ವತ್ರಿಕ ಪ್ರತಿಭಟನೆ

Update: 2021-12-16 19:07 IST

ಉಡುಪಿ, ಡಿ.16: ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದು ಹಾಗೂ ಬ್ಯಾಂಕಿಂಗ್ ನಿಯಮಗಳ (ತಿದ್ದುಪಡಿ) ವಿಧೇಯಕ 2021ನ್ನು ಸಂಸತ್ತಿನಲ್ಲಿ ಮಂಡಿಸಲು ಹುನ್ನಾರ ನಡೆಸುತ್ತಿರುವ ಕೇಂದ್ರ ಸರಕಾರದ ಕ್ರಮದ ವಿರುದ್ದ ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆಯ ವತಿಯಿಂದ ಬ್ಯಾಂಕಿನ ಅಧಿಕಾರಿಗಳು ಹಾಗೂ ನೌಕರರು ಉಡುಪಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ ದೇಶಾದ್ಯಂತ ಡಿ.16 ಮತ್ತು 17ರಂದು ಎರಡು ದಿನಗಳ ಕಾಲ ಮುಷ್ಕರ ನಡೆಸಲು ನೀಡಿದ ಕರೆಯಂತೆ ಇಂದು ಉಡುಪಿ ಕೆನರಾ ಬ್ಯಾಂಕ್‌ನ ಕೋರ್ಟ್‌ರೋಡ್ ಶಾಖೆಯ ಎದುರು ಪ್ರತಿಭಟನೆ ನಡೆಯಿತು.

ಸುಧಾರಣೆಯ ನೆಪದಲ್ಲಿ ಕೆಲವೊಂದು ಜನವಿರೋಧಿ ಕ್ರಮಗಳನ್ನು ಕೇಂದ್ರ ಸರಕಾರ ಕೈಗೆತ್ತಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದು ಹಾಗೂ ಬ್ಯಾಂಕಿಂಗ್ ನಿಯಮಗಳ (ತಿದ್ದುಪಡಿ) ವಿಧೇಯಕ-2021ನ್ನು ಸಂಸತ್ತಿನಲ್ಲಿ ಮಂಡಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕವಾದ ಕೇಂದ್ರ ಸರಕಾರದ ಈ ತಪ್ಪು ನಿರ್ಣಯವನ್ನು ಖಂಡಿಸಿ ಬ್ಯಾಂಕ್ ಯುನಿಯನ್‌ಗಳ ಸಂಯುಕ್ತ ವೇದಿಕೆ ದೇಶದಾದ್ಯಂತ ಎರಡು ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬ್ಯಾಂಕಿನ ಅಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಮುಷ್ಕರ ಯಶಸ್ವಿಗೊಂಡಿದೆ ಎಂದು ಪ್ರತಿಭಟನಕಾರರು ಹೇಳಿದರು.

ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಸಭೆ ಯಲ್ಲಿ ತೀವವಾಗಿ ಖಂಡಿಸಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಐಬಿಇಎ ಹಾಗೂ ಇತರ ಬ್ಯಾಂಕಿಂಗ್ ಸಂಘಟನೆಗಳ ಮುಖಂಡರಾದ ರಮೇಶ್, ಸುಪ್ರಿಯಾ, ರವಿಶಂಕರ್, ಎಂ. ರತ್ನಾಕರ ಶೆಣೈ, ಕೆನರಾ ಬ್ಯಾಂಕಿನ ಮರಿಯೋ ಮಥಾಯಸ್, ಅವಿನಾಶ್ ಹೆಗಡೆ, ಪ್ರೇಮನಾಥ್ ಪೂಜಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಗೇಶ್ ನಾಯಕ್, ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಕೆನರಾ ಬ್ಯಾಂಕಿನ ವರದರಾಜ್, ಪ್ರವೀಣ್, ಮುಖಂಡರಾದ ರವೀಂದ್ರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮನೋಜ್‌ಕುಮಾರ್ ಕಲ್ಮಾಡಿ, ರಮೇಶ್, ಬ್ಯಾಂಕ್ ಆಫ್ ಬರೋಡದ ರಮೇಶ್, ಯೂಕೋ ಬ್ಯಾಂಕಿನ ಸೂರಜ್, ಕರ್ನಾಟಕ ಬ್ಯಾಂಕಿನ ನಿತ್ಯಾನಂದ, ಸಂಘಟನೆಯ ಇತರ ಪ್ರಮುಖರಾದ ಜಯನ್ ಮಲ್ಪೆ, ಸುರೇಖಾ ಮುಂತಾ ದವರು ಭಾಗವಹಿಸಿದ್ದರು. ಪ್ರತಿಭಟನೆಯನ್ನು ಯುಎಫ್‌ಬಿಯುನ ಸಂಚಾಲಕರಾದ ಹೆರಾಲ್ಡ್ ಡಿಸೋಜಾ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News