ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವವರು ಪಕ್ಷದ ಕಾರ್ಯಕರ್ತರಲ್ಲ: ಬಿಜೆಪಿ ದಕ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ
ಮಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮುಖಂಡರ ವಿರುದ್ಧ ಅವಹೇಳನ ಮಾಡುವವರು, ರಾಜೀನಾಮೆ ಕೇಳುವವರು ಪಕ್ಷದ ನೈಜ ಕಾರ್ಯಕರ್ತರಲ್ಲ. ಕೆಲವರು ಪಕ್ಷದ ಕಾರ್ಯಕರ್ತರ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಸುದ್ದಿಗೋಷ್ಠಿಯಲ್ಲಿಂದು ಸ್ಪಷ್ಟಣೆ ನೀಡಿದ್ದಾರೆ.
ಲವ್ ಜಿಹಾದ್, ಮತಾಂತರ ನಿಷೇಧ ಕಾಯಿದೆ ಜಾರಿ ಮಾಡುವ ಇಂಗಿತ ಬಿಜೆಪಿ ಹೊಂದಿದೆ. ಆದರೆ ಇದಕ್ಕೆ ಪೂರಕವಾದ ವಾತಾವರಣ ಬೇಕಾಗಿದೆ. ಎಲ್ಲಾ ಸಮಸ್ಯೆಗಳಿಗೆ ರಾಜ್ಯಾಧ್ಯಕ್ಷರನ್ನು ಹೊಣೆ ಮಾಡಿ ಟೀಕಿಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಉಪ್ಪಿನಂಗಡಿಯ ಘಟನೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಹಲ್ಲೆ ನಡೆಸಿದ ಆರೋಪಿಗಳಾದ ಪಿಎಫ್ಐ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುದರ್ಶನ್ ತಿಳಿಸಿದ್ದಾರೆ. ಶಾಂತಿ ಕದಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಅವರು ಒತ್ತಾಯಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ ಬಿಜೆಪಿ ನಿರೀಕ್ಷಿತ ಮತಗಳಿಸಿದೆ ಎಂದು ಸುದರ್ಶನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ, ರವಿಶಂಕರ್ ಮಿಜಾರ್, ರಾಧಾಕೃಷ್ಣ ಉಪಸ್ಥಿತರಿದ್ದರು.