×
Ad

ಉಪ್ಪಿನಂಗಡಿಯಲ್ಲಿ ಲಾಠಿಚಾರ್ಜ್ ಪ್ರಕರಣ; ಪ್ರಮಾದ ಮುಚ್ಚಿ ಹಾಕಲು ಪೊಲೀಸರಿಂದ ಕಟ್ಟುಕಥೆಗಳು ಸೃಷ್ಟಿ: ಪಿಎಫ್‌ಐ ಆರೋಪ

Update: 2021-12-16 20:00 IST

ಮಂಗಳೂರು, ಡಿ.16: ಉಪ್ಪಿನಂಗಡಿಯ ಪ್ರತಿಭಟನೆಗೆ ಸಂಬಂಧಿಸಿದಂತೆ ತಪ್ಪೆಸಗಿರುವ ಪೊಲೀಸರು ಇದೀಗ ಅದನ್ನು ಮರೆ ಮಾಚಲು ಕಟ್ಟುಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಪಿಎಫ್‌ಐ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.

ನಗರದ ನೆಲ್ಲಿಕಾಯಿ ರಸ್ತೆಯ ಕೋಸ್ಟಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಮತ್ತು ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಡಿ.14ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಹಲ್ಲೆ, ಠಾಣೆಯ ಮೇಲೆ ಕಲ್ಲೆಸೆತ, ಆ್ಯಂಬುಲೆನ್ಸ್‌ನಲ್ಲಿ ಮಾರಕಾಯುಧ ಸಾಗಾಟ, ಗಲಭೆಗೆ ಪಿತೂರಿ, ಪೊಲೀಸ್ ಜೀಪ್‌ಗೆ ಹಾನಿ ಇತ್ಯಾದಿ ಆರೋಪಗಳೆಲ್ಲವೂ ಸುಳ್ಳು. ಲಾಠಿಚಾರ್ಜ್ ನಡೆಸಿದ ಬಳಿಕವೂ ಪೊಲೀಸ್ ಇನ್‌ ಸ್ಪೆಕ್ಟರ್ ಪ್ರಸನ್ನ ಕುಮಾರ್ ಠಾಣೆಯ ಮುಂದೆಯೇ ಇದ್ದರು. ಆವಾಗ ಅವರ ಕೈಯಲ್ಲಿ ಯಾವುದೇ ಗಾಯದ ಗುರುತಾಗಲೀ, ಬ್ಯಾಂಡೇಜ್ ಕಟ್ಟಿದ ಕುರುಹುವಾಗಲೀ ಕಂಡು ಬಂದಿರಲಿಲ್ಲ. ಲಾಠಿ ಚಾರ್ಜ್ ನಡೆದು ಜನರು ಚದುರಿ ಹೋಗುವವರೆಗೂ ಪೊಲೀಸರ ಮೇಲೆ ದಾಳಿ ನಡೆಸಿದ ಬಗ್ಗೆ ಯಾವುದೇ ಸುದ್ದಿಗಳು ಬಂದಿರಲಿಲ್ಲ. ಆದರೆ ಲಾಠಿಚಾರ್ಜ್‌ನಿಂದ ಪ್ರತಿಭಟನಕಾರರು ಗಂಭೀರ ಗಾಯಗೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಈ ಅರೋಪಗಳು ಕೇಳಿ ಬಂದಿವೆ. ನಂತರ ದಾಖಲಿಸಲಾದ ಎಫ್‌ಐಆರ್‌ಗಳಲ್ಲಿ ಒಂದೊಂದೇ ಆರೋಪಗಳನ್ನು ಸೇರಿಸಲಾಯಿತು ಎಂದರು.

ಈಗಾಗಲೇ ಪೊಲೀಸ್‌ ಠಾಣೆ ಮತ್ತು ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಪ್ರತಿಭಟನಕಾರರು ದಾಳಿ ನಡೆಸುವ ದೃಶ್ಯಗಳಿದ್ದರೆ ಬಹಿರಂಗಪಡಿಸಲಿ? ಘಟನೆಯ ದಿನದಂದು ರಾತ್ರಿ 1 ಗಂಟೆಯವರೆಗೂ ಸಂಘಟನೆಯ ಜಿಲ್ಲಾ ನಾಯಕರು ಡಿವೈಎಸ್ಪಿ ಅವರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದಾಗಲೂ ಈ ಹುಸಿ ಆರೋಪಗಳ ಕೇಳಿ ಬಂದಿರಲಿಲ್ಲ. ಜಿಲ್ಲಾ ಎಸ್ಪಿ ಕೂಡ ಸುದ್ದಿಗೋಷ್ಠಿಯಲ್ಲಿ ನಾಲ್ಕು ಮಂದಿ ಪೊಲೀಸರಿಗೆ ಗಾಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆಯೇ ವಿನಃ ಇತರ ಘಟನೆಗಳ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಮಂಗಳೂರಿನಲ್ಲಿ ನಡೆದ ಎನ್‌ಆರ್‌ಸಿ ಪ್ರತಿಭಟನೆಯ ವೇಳೆಯೂ ಪೊಲೀಸರು ತಮ್ಮ ಪ್ರಮಾದಗಳನ್ನು ಮುಚ್ಚಿ ಹಾಕಲು ಹಲವು ಕಟ್ಟು ಕಥೆಗಳನ್ನು ಕಟ್ಟಿದ್ದರು. ಬಳಿಕ ಅದರ ವಾಸ್ತವಾಂಶಗಳು ಬಯಲಾಗಿದ್ದವು. ಇದು ಇಡೀ ಪೊಲೀಸ್‌ ಇಲಾಖೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು ಎಂದು ಎ.ಕೆ.ಅಶ್ರಫ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಿಎಫ್‌ಐ ಮಂಗಳೂರು ನಗರ ಸಮಿತಿಯ ಅಧ್ಯಕ್ಷ ಖಾದರ್ ಕುಳಾಯಿ ಉಪಸ್ಥಿತರಿದ್ದರು.

ಡಿ.17ರಂದು ಎಸ್ಪಿ ಕಚೇರಿ ಚಲೋ

ಉಪ್ಪಿನಂಗಡಿಯಲ್ಲಿ ನಡೆದ ಅಮಾನುಷ ಪೊಲೀಸ್ ದೌರ್ಜನ್ಯ, ಲಾಠಿಜಾರ್ಜ್ ಖಂಡಿಸಿ ಡಿ.17ರಂದು ಅಪರಾಹ್ನ 3 ಗಂಟೆಗೆ ಮಂಗಳೂರಿನ ಕ್ಲಾಕ್‌ ಟವರ್‌ನಿಂದ ದ.ಕ.ಜಿಲ್ಲಾ ಎಸ್ಪಿ ಕಚೇರಿಗೆ ರ್ಯಾಲಿ ನಡೆಯಲಿದೆ ಎಂದು ಪಿಎಫ್‌ಐ ಮುಖಂಡರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News