ಡಿ. 21: ವೀರರಾಣಿ ಅಬ್ಬಕ್ಕ ಉತ್ಸವ-ರಜತ ಸಂಭ್ರಮ
ಮಂಗಳೂರು, ಡಿ.16: ತುಳು ಸಾಹಿತ್ಯ ಅಕಾಡಮಿ, ಉಳ್ಳಾಲ ನಗರಸಭೆ ವತಿಯಿಂದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸಹಯೋಗದಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2021’ರ ರಜತ ಸಂಭ್ರಮವು ಡಿ.21ರಂದು ಉಳ್ಳಾಲ ನಗರಸಭೆಯ ಮಹಾತ್ಮಾ ಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 9:30ಕ್ಕೆ ತೊಕ್ಕೊಟ್ಟು ವೀರ ಮಾರುತಿ ವ್ಯಾಯಾಮ ಶಾಲೆ ಬಳಿಯಿಂದ ರಂಗಮಂದಿರದವರೆಗೆ ಆಕರ್ಷಕ ತುಳುನಾಡ ಜಾನಪದ ದಿಬ್ಬಣ ಏರ್ಪಡಿಸಲಾಗಿದೆ. ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಉದ್ಘಾಟಿಸುವರು. 10:30ಕ್ಕೆ ವೀರರಾಣಿ ಅಬ್ಬಕ್ಕ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಧ್ವಜಾರೋಹಣ ನೆರವೇರಿಸುವರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಕೇಸರಿ ರಾಜರತ್ನಯ್ಯ ಉತ್ಸವ ಉದ್ಘಾಟಿಸಲಿದ್ದಾರೆ. ಹಿರಿಯ ಜಾನಪದ ಕಲಾವಿದೆ ಸಿಂಧು ಗುಜರನ್ ಮೊಲೊಟ್ಟು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಶಾಸಕ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಈ ಸಂದರ್ಭ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಗುವುದು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಶ್ರೀನಾಥ್, ತುಳು ಚಿತ್ರನಟ ಅರವಿಂದ ಬೋಳಾರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ತುಳು ಸಾಹಿತ್ಯ ಅಕಾಡಮಿ ಪ್ರಥಮ ಅಧ್ಯಕ್ಷ ಪ್ರೊ.ಬಿ.ಎ. ವಿವೇಕ ರೈ ಆಶಯ ಭಾಷಣ ಮಾಡಲಿದ್ದಾರೆ. ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯಾಹ್ನ ಮಂಗಳೂರು ವಿವಿ ಕುಲಸಚಿವ ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ‘ಭಾರತ ಸ್ವಾತಂತ್ರದ ಅಮೂರ್ತ ವರ್ಷೊದ ಪೊರ್ತು ರಾಣಿ ಅಬ್ಬಕ್ಕನ ಪೊರಂಬಾಟದ ನೆಂಪು’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಉಡುಪಿಯ ಜಾನಪದ ಸಂಶೋಧಕ ಶ್ರೀಕಾಂತ್ ಶೆಟ್ಟಿ, ಉಪನ್ಯಾಸಕ ಅಕ್ಷಯ ಗೋಖಲೆ ಕಾರ್ಕಳ ವಿಚಾರ ಮಂಡನೆ ಮಾಡಲಿದ್ದಾರೆ. ಬಳಿಕ ಬಹುಭಾಷಾ ಕವಿ ಕಾವ್ಯ ಗಾಯನ ಗೋಷ್ಠಿಯು ಕುಶಲಾಕ್ಷಿ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ದಯಾನಂದ ಜಿ. ಕತ್ತಲ್ ಸಾರ್ ಮಾಹಿತಿ ನೀಡಿದರು.
ಸಂಜೆ 5ರಿಂದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಸಚಿವ ಎಸ್. ಅಂಗಾರ ಭಾಗವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ವಿವಿ ಕುಲಪತಿ ಪ್ರೊ.ಯಡಪಡಿತ್ತಾಯ, ಕಸಾಪ ನೂತನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ, ಅಧ್ಯಕ್ಷ ದಿನಕರ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಗೌರವ ಉಪಾಧ್ಯಕ್ಷ ಹೈದರ್ ಪರ್ತಿಪಾಡಿ, ತುಳು ಸಾಹಿತ್ಯ ಅಕಾಡಮಿಯ ಸದಸ್ಯ ನಾಗೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಚಂದ್ರಕಲಾ, ರೋಹಿಣಿಗೆ ಪ್ರಶಸ್ತಿ ಪ್ರದಾನ
ಈ ಬಾರಿಯ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಮಂಗಳೂರಿನ ಗಣಪತಿ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಹಾಗೂ ವೀರರಾಣಿ ಅಬ್ಬಕ್ಕ ಪುರಸ್ಕಾರವನ್ನು ನಿವೃತ್ತ ಶಿಕ್ಷಕಿ, ಹಿರಿಯ ಚಿಂತಕಿ ಕೆ.ಎ. ರೋಹಿಣಿ ಅವರಿಗೆ ಸಮಾರೋಪ ಸಮಾರಂಭದಲ್ಲಿ ಪ್ರದಾನಿಸಲಾಗುವುದು.