×
Ad

ಮಂಗಳೂರು; ಲಂಚ ಸ್ವೀಕಾರ ಪ್ರಕರಣ: ಆರೋಪಿಗಳಿಗೆ ಶಿಕ್ಷೆ

Update: 2021-12-16 21:40 IST

ಮಂಗಳೂರು, ಡಿ.16: ಲಂಚ ಸ್ವೀಕಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಗುರುವಾರ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಇಬ್ಬರು ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಲಂಚ ಸ್ವೀಕಾರ ಪ್ರಕರಣದ ಆರೋಪಿ ಮಂಗಳೂರು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯು.ಜಿತೇಂದ್ರನಾಥ್‌ಗೆ 7 ವರ್ಷ ಶಿಕ್ಷೆ ಹಾಗೂ 30 ಸಾವಿರ ರೂ.ದಂಡ ಹಾಗೂ ಎರಡನೇ ಆರೋಪಿ ಗುತ್ತಿಗೆ ಆಧಾರಿತ ಕಂಪ್ಯೂಟರ್ ಆಪರೇಟರ್ ಅನುಷ್ಕಾಗೆ 3 ವರ್ಷಗಳ ಸಾದಾ ಸಜೆ ಹಾಗೂ 10 ಸಾವಿರ ದಂಡ ವಿಧಿಸಲಾಗಿದೆ.

ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ರಾಜ್ಯ ಸರಕಾರದಿಂದ ಪ್ರವಾಸಿ ಟ್ಯಾಕ್ಸಿ ಖರೀದಿಸಲು ದೊರೆಯುವ ಸಹಾಯ ಧನದ ಮಂಜೂರಾತಿಗೆ ಜಿತೇಂದ್ರನಾಥ್ 15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬರ್ನಾಡ್ ರೋಶನ್ ಮಸ್ಕರೇನ್ಹಸ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ 2014ರ ಸೆ.10ರಂದು ದಾಳಿ ನಡೆದಿತ್ತು.

ಪೊಲೀಸ್ ನಿರೀಕ್ಷಕ ವಿಜಯ ಪ್ರಸಾದ್ ದಾಳಿ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News