×
Ad

ಜಾಲಿ ಪ.ಪಂ.ಚುನಾವಣೆ; ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಅಭ್ಯರ್ಥಿಗಳ ನಾಮಪತ್ರ ರದ್ದುಗೊಳಿಸುವಂತೆ ಧರಣಿ

Update: 2021-12-16 22:18 IST

ಭಟ್ಕಳ: ಡಿ.27 ರಂದು ನಡೆಯುವ ಜಾಲಿ ಪಟ್ಟಣಪಂಚಾಯತ್ ಚುನಾವಣೆಯ ಪರಿಶಿಷ್ಠಜಾತಿ ಮೀಸಲು ವಾರ್ಡ್ ನಂ-1ರಲ್ಲಿ ಇಬ್ಬರು ಅಭ್ಯರ್ಥಿಗಳು ಸುಳ್ಳು ಜಾತಿ ಪ್ರಮಾಣ ಸಲ್ಲಿಸಿದ್ದು ಅವರ ನಾಮಪತ್ರವನ್ನು ರದ್ದುಗೊಳಿಸುವಂತೆ ಆಗ್ರಹಿಸಿ  ಹಿಂದೂ ಕಾಲನಿಯ ನಿವಾಸಿಗಳು ಗುರುವಾರ ಜಾಲಿ ಪ.ಪಂ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಮರಣಾ ಉಪವಾಸ ಸತ್ಯಗ್ರಹ ಆರಂಭಿಸಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಿರಣಶಿರೂರು, ವಾರ್ಡ್ ನಂ1 ರಲ್ಲಿ ಮೊಗೇರ್ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಸುಳ್ಳುಜಾತಿ ಪ್ರಮಾಣಪತ್ರ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದು ಇದರಿಂದಾಗಿ ನೈಜಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಕುರಿತಂತೆ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತ ಬಂದರೂ ಯಾವುದೇ ಪ್ರಯೋಜನವಾಗ ಹಿನ್ನೆಲೆಯಲ್ಲಿ ಗುರುವಾರದಿಂದ ನಮ್ಮ ಬೇಡಿಕೆ ಈಡೇರಿವವರೆಗೂ ನಾವು ಅಮರಣಾಂತ ಉಪವಾಸ ಸತ್ಯಗ್ರಹ ಹಮ್ಮಿಕೊಂಡಿದ್ದಾಗಿ ತಿಳಿಸಿದ್ದಾರೆ.

ಈ ಕುರಿತಂತೆ ಚುನಾವಣಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿರುವ ಹಿಂದೂ ಕಾಲನಿ ನಿವಾಸಿ ಮಾರುತಿ ಬಾಬು ಪಾವಸ್ಕರ್ ಎಂಬವರು ಜಾಲಿ ಪ.ಪಂ ವಾರ್ಡ್ ನಂಬರ್ 1ರಲ್ಲಿ ಪ.ಜಾ ಮೀಸಲಾತಿ ಅಡಿಯಲ್ಲಿ ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಮೀನುಗಾರ ಮೊಗೇರ್ ಸಮುದಾಯಕ್ಕೆ ಸೇರಿದ ಪುರಂದರ ಕುಪ್ಪ ಮೊಗೇರ್ ಹಾಗೂ ಈಶ್ವರ ಲಚ್ಮಯ್ಯ ಮೊಗೇರ್ ಎಂಬುವವರು ಕೂಡ ಇದೇ ವರ್ಗದಲ್ಲಿ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಆದರೆ 2008ರಿಂದ ಸರ್ಕಾರವು ಮೊಗೇರ್ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡುವುದನ್ನು ಸ್ಥಗಿತಗೊಳಿಸಿದ್ದು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕಾರಣಕ್ಕಾಗಿ ಸದ್ರಿ ವ್ಯಕ್ತಿಗಳು ಪ.ಜಾತಿಗೆ ಸೇರಿರುವುದಿಲ್ಲ. ಇವರು ಪ.ಜಾ. ಎಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಇವರ ಮೇಲೆ ಎಸ್.ಸಿ.ಎಸ್ಟಿ ಕಾಯಿದೆ ಕಲಂ3(1) ಹಾಗೂ ಭಾರತೀಯ ದಂಡ ಸಂಹಿತಯ ಕಲಂ 198, 420 ಅಡಿಯಲ್ಲಿ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾರಣ ಇವರ ಉಮೇದುವಾರಿಕೆಯನ್ನು ರದ್ದುಗೊಳಿಸಬೇಕೆಂದು ಮನವಿ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದರು.

ಈ ಕುರಿತಂತೆ ಪ್ರತಿಕ್ರಿಯೆ ನೀಡುವ ಚುನಾವಣಾಧಿಕಾರಿ ದೇವಿದಾಸ ಮೊಗೇರ್, ಚುನಾವಣೆಯ ನೀತಿ ಸಂಹಿತೆಯಂತೆ ಇಬ್ಬರು ವ್ಯಕ್ತಿಗಳ ಉಮೇದುವಾರಿಕೆಯನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಉಪವಾಸ ಹಿಂತೆಗೆದುಕೊಳ್ಳುವಂತೆ ಡಿವೈಎಸ್ಪಿ, ಸಿಪಿಐ ಮನವಿ: ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕಾಗಿದ್ದು ಚುನಾವಣೆ ಕಚೇರಿಯೊಳಗೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಇದು ಚುನಾವಣಾ ಕಾರ್ಯಕ್ಕೆ ಅಡ್ಡಿಪಡಿಸಿದಂತಾಗುತ್ತದೆ. ಆದ್ದರಿಂದ ಪ್ರತಿಭಟನೆ ಹಿಂಪಡೆಯುವಂತೆ ಭಟ್ಕಳ ಡಿವೈ.ಎಸ್ಪಿ ಬೆಳ್ಳಿಯಪ್ಪ ಹಾಗೂ ಸಿಪಿಐ ದಿವಾಕರ್ ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದ್ದು ಪ್ರತಿಭಟನಾಕಾರರು ಚುನಾವಣಾ ಕಚೇರಿಯಿಂದ ಹೊರಗಡೆ ಬಂದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. 
ಪ್ರತಿಭಟನೆಯ ನೇತೃತ್ವವನ್ನು ನೈಜಪರಿಶಿಷ್ಟ ಜಾತಿಯವರಾದ ನಾರಾಯಣ ಶಿರೂರು, ಮಾರೂರಿ ಪಾವಸ್ಕರ್, ನರಸಿಂಹ ಶಿರೂರು, ಮಹೇಶ ಪಾಲೇಕರ್, ದಿನೇಶ ಪಾವಸ್ಕರ್, ಕಿರಣ ಶಿರೂರು  ವಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News