ಇಥಿಯೋಪಿಯಾ: ಪತ್ರಕರ್ತನ ಬಂಧನ

Update: 2021-12-16 18:19 GMT

ಅದೀಸ್ ಅಬಾಬ, ಡಿ.16: ಅಸೋಸಿಯೇಟೆಡ್ ಪ್ರೆಸ್(ಎಪಿ) ಸುದ್ಧಿಸಂಸ್ಥೆ ಪರ ಕೆಲಸ ಮಾಡುವ ಸ್ವತಂತ್ರ ಪತ್ರಕರ್ತನನ್ನು ಇಥಿಯೋಪಿಯಾದ ಪೊಲೀಸರು ಬಂಧಿಸಿರುವುದಾಗಿ ಅಮೆರಿಕದ ಸುದ್ಧಿಸಂಸ್ಥೆ ವರದಿ ಮಾಡಿದೆ.

  
ವರದಿಗಾರಿಕೆಗೆ ತೆರಳಿದ್ದ ವೀಡಿಯೊ ಪತ್ರಕರ್ತ ಅಮೀರ್ ಅಮನ್ ಕಿಯಾರೊರನ್ನು ರಾಜಧಾನಿ ಅದೀಸ್ ಅಬಾಬದಲ್ಲಿ ನವೆಂಬರ್ 28ರಂದು ಬಂಧಿಸಲಾಗಿದ್ದು ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಎಪಿ ಸುದ್ಧಿಸಂಸ್ಥೆ ಆಗ್ರಹಿಸಿದೆ. ಕಿಯಾರೊ ಜತೆ ಥಾಮಸ್ ಎಂಗಿಡಾ ಮತ್ತು ಅದ್ದೀಸು ಮುಲ್ನೆ ಎಂಬ ಇಬ್ಬರು ಪತ್ರಕರ್ತರನ್ನೂ ಬಂಧಿಸಲಾಗಿದೆ.
  
ಕಳೆದ ತಿಂಗಳು ಇಥಿಯೋಪಿಯಾ ಸರಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಆ ದೇಶದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಸೇನಾಪಡೆಗಳ ಚಲನವಲನದ ಬಗ್ಗೆ , ಯುದ್ಧದ ಫಲಿತಾಂಶದ ಕುರಿತು ಅನಧಿಕೃತ (ಸರಕಾರದಿಂದ ಬಿಡುಗಡೆಯಾಗದ) ಸುದ್ಧಿಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಭಯೋತ್ಪಾದಕ ಗುಂಪಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನೀಡಲು ಹಲವು ಸಾಮಾಜಿಕ ಜಾಲತಾಣಗಳ ಬಳಕೆಗೂ ನಿಷೇಧ ಹೇರಲಾಗಿದೆ.
   
ತುರ್ತು ಪರಿಸ್ಥಿತಿ ನಿಯಮದ ಪ್ರಕಾರ, ಶಂಕಿತ ವ್ಯಕ್ತಿಗಳನ್ನು ವಿಚಾರಣೆಯಿಲ್ಲದೆ ತುರ್ತು ಪರಿಸ್ಥಿತಿ ಅಂತ್ಯಗೊಳ್ಳುವ ವರೆಗೆ ಬಂಧನದಲ್ಲಿ ಇಡಬಹುದಾಗಿದೆ. ಅಲ್ಲದೆ ವಾರಾಂಟ್‌ನ ಅಗತ್ಯವಿಲ್ಲದೆ ಮನೆಮನೆ ಶೋಧ ಕಾರ್ಯಾಚರಣೆಗೆ ಅವಕಾಶವಿದೆ. ಕಳೆದೊಂದು ವರ್ಷದಿಂದ ಉತ್ತರದ ಟಿಗ್ರೆ ವಲಯದಲ್ಲಿ ಬಂಡುಗೋರರು ಹಾಗೂ ಸರಕಾರಿ ಪಡೆಗಳ ಮಧ್ಯೆ ಭೀಕರ ಸಂಘರ್ಷ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News