ಕ್ಯಾಮರೂನ್: ಪ್ರತ್ಯೇಕತಾವಾದಿ ಹೋರಾಟಗಾರರ ದಾಳಿಯಿಂದ ಶಿಕ್ಷಣದ ಮೇಲೆ ವಿನಾಶಕಾರಿ ಪರಿಣಾಮ

Update: 2021-12-16 18:22 GMT
file photo: pti

 ನ್ಯೂಯಾರ್ಕ್, ಡಿ.16: ಕ್ಯಾಮರೂನ್ ನ ಸಂಘರ್ಷ ಪೀಡಿತ ಆಂಗ್ಲೊಫೋನ್ ವಲಯದಲ್ಲಿ ಪ್ರತ್ಯೇಕತಾವಾದಿ ಹೋರಾಟಗಾರರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವಿರುದ್ಧ ನಡೆಸುತ್ತಿರುವ ವ್ಯಾಪಕ ಮತ್ತು ವ್ಯವಸ್ಥಿತ ದಾಳಿಯು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತಿದೆ ಎಂದು ಜಾಗತಿಕ ಮಾನವಹಕ್ಕು ನಿಗಾ ಸಮಿತಿಯ ವರದಿ ಹೇಳಿದೆ.

ವಾಯವ್ಯ ಮತ್ತು ನೈಋತ್ಯ ವಲಯದಲ್ಲಿ ಇಂಗ್ಲಿಷ್ ಮಾತನಾಡುವ ಪ್ರತ್ಯೇಕತಾವಾದಿ ಸಂಘಟನೆ 2017ರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹತ್ಯೆ, ಹಲ್ಲೆ, ಅಪಹರಣ, ಬೆದರಿಕೆ ಪ್ರಕರಣಗಳನ್ನು ವ್ಯಾಪಕಗೊಳಿಸಿದೆ . ಈ ಕ್ರಿಮಿನಲ್ ಆಕ್ರಮಣದಿಂದ ಸಂತ್ರಸ್ತರಿಗೆ ದೈಹಿಕ ಮತ್ತು ಮಾನಸಿಕ ಸಮಸ್ಯೆಯಾಗುವುದಷ್ಟೇ ಅಲ್ಲ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಗಂಡಾಂತರಕ್ಕೆ ನೂಕಿದೆ ಎಂದು ಗುರುವಾರ ಬಿಡುಗಡೆಗೊಂಡ 131 ಪುಟಗಳ ವರದಿ ಹೇಳಿದೆ.
  
2020ರ ನವೆಂಬರ್‌ ನಿಂದ 2021ರ ನವೆಂಬರ್ ಅವಧಿಯಲ್ಲಿ 155 ಮಂದಿಯನ್ನು(29 ವಿದ್ಯಾರ್ಥಿಗಳು, 47 ಶಿಕ್ಷಕರು ಹಾಗೂ ಇತರ ಪ್ರತ್ಯಕ್ಷದರ್ಶಿಗಳ ಸಹಿತ) ಸಂದರ್ಶಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಮಾನವ ಹಕ್ಕು ನಿಗಾ ಸಮಿತಿಯ ಹಿರಿಯ ಅಧಿಕಾರಿ ಇಲಾರಿಯಾ ಅಲೆಗ್ರಾಝಿ ಹೇಳಿದ್ದಾರೆ. ಪ್ರತ್ಯೇಕತಾವಾದಿ ಹೋರಾಟಗಾರರು ಶಾಲೆಯನ್ನು ಮುಚ್ಚುವಂತೆ ಆದೇಶಿಸಿದ ಬಳಿಕ ಶಾಲೆಯ ಮೂಲಸೌಕರ್ಯ ಹಾಗೂ ಆಸ್ತಿಯನ್ನು ಧ್ವಂಸಗೊಳಿಸಿದ 15 ಪ್ರಕರಣಗಳ ವಿಸ್ತೃತ ವಿವರ ಈ ವರದಿಯಲ್ಲಿದೆ. 2017ರಿಂದ ಕನಿಷ್ಟ 70 ಶಾಲೆಗಳ ಮೇಲೆ ಆಕ್ರಮಣ ನಡೆದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News