×
Ad

ಡೊಮಿನಿಕನ್ ಗಣರಾಜ್ಯ: ವಿಮಾನ ಅಪಘಾತದಲ್ಲಿ 9 ಮಂದಿ ಮೃತ್ಯು

Update: 2021-12-16 23:58 IST

ಸ್ಯಾಂಟೊ ಡೊಮಿಂಗೊ, ಡಿ.16: ಡೊಮಿನಿಕನ್ ಗಣರಾಜ್ಯದಲ್ಲಿ ಖಾಸಗಿ ವಿಮಾನ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲಾ 9 ಪ್ರಯಾಣಿಕರೂ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮ ಹಾಗೂ ವಿಮಾನಯಾನ ಸಂಸ್ಥೆ ಹೇಳಿದೆ.

ದುರಂತದಲ್ಲಿ ಮೃತಪಟ್ಟವರಲ್ಲಿ ಪೆಟ್ರೋರಿಕಾದ ಖ್ಯಾತ ಸಂಗೀತ ನಿರ್ದೇಶಕ ಜೋಸ್ ಏಂಜೆಲ್ ಹೆರ್ನಾಂಡೆರ್ ಕೂಡಾ ಸೇರಿದ್ದಾರೆ. ಮಿಯಾಮಿಯ ಎಲ್ ಹ್ಯುಗೆರೊ ವಿಮಾನ ನಿಲ್ದಾಣದಿಂದ 7 ಪ್ರಯಾಣಿಕರು ಹಾಗೂ ಇಬ್ಬರು ಸಿಬಂದಿ ವರ್ಗದವರೊಂದಿಗೆ ಪ್ರಯಾಣ ಬೆಳೆಸಿದ್ದ ವಿಮಾನ ಸ್ಯಾಂಟೊ ಡೊಮಿಂಗೋದ ಲಾಸ್ ಅಮೆರಿಕಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಹಂತದಲ್ಲಿ ಅಪಘಾತಕ್ಕೀಡಾಗಿದೆ ಎಂದು ಹೆಲಿಡೊಸ ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದೆ.
 
ವಿಮಾನ ದುರಂತದ ಬಳಿಕ ವಿಮಾನ ನಿಲ್ದಾಣದ ಕಾರ್ಯ ನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಹೆಲಿಡೊಸ ಸಂಸ್ಥೆಯ ಸಹಮಾಲಕ ಮತ್ತವರ ಪುತ್ರನೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 4 ಮತ್ತು 13 ವರ್ಷದವರೂ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಸಂಗೀತ ನಿರ್ದೇಶಕ ಹೆರ್ನಾಂಡೆರ್ ಜತೆ ಅವರ 6 ಮಂದಿ ಸಹಾಯಕರೂ ವಿಮಾನದಲ್ಲಿದ್ದರು ಎಂದು ಹೆಲಿಡೊಸ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News