×
Ad

ಮುಂದಿನ ವಾರ ಜೈಡಸ್ ಸೂಜಿ ಮುಕ್ತ ಕೋವಿಡ್ ಲಸಿಕೆ !

Update: 2021-12-17 07:38 IST
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಜೈಡಸ್ ಹೆಲ್ತ್‌ಕೇರ್‌ನ ಕೊರೋನ ವೈರಸ್ ವಿರುದ್ಧದ ಲಸಿಕೆಯನ್ನು ಮುಂದಿನ ವಾರದ ವೇಳೆಗೆ ಭಾರತದಲ್ಲಿ ಪರಿಚಯಿಸಲಾಗುವುದು ಎಂದು ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ಉನ್ನತ ಮೂಲಗಳು ಹೇಳಿವೆ.

"ಲಸಿಕೆ ಶಾಟ್‌ಗಳನ್ನು ನೀಡುವವರಿಗೆ ನೀಡಲಾಗುವ ತರಬೇತಿ ಬಹುತೇಕ ಪೂರ್ಣಗೊಂಡಿದೆ ಹಾಗೂ ಶೀಘ್ರವೇ ಅಂದರೆ ಬಹುಶಃ ಮುಂದಿನ ವಾರದ ಒಳಗಾಗಿ ಈ ಲಸಿಕೆ ನೀಡಿಕೆ ಆರಂಭಿಸಲಾಗುವುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಜೈಕೋವ್-ಡಿ ವಿಶ್ವದ ಮೊಟ್ಟಮೊದಲ ಡಿಎನ್‌ಎ-ಆಧರಿತ ಸೂಜಿಮುಕ್ತ ಕೋವಿಡ್-19 ಲಸಿಕೆಯಾಗಿದ್ದು, 12 ವರ್ಷ ಮೇಲ್ಪಟ್ಟವರ ಮೇಲೆ ತುರ್ತು ಬಳಕೆಗಾಗಿ ಅನುಮೋದನೆ ಪಡೆದಿದೆ. ಆದಾಗ್ಯೂ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಯಾವುದೇ ನೀತಿ ದೇಶದಲ್ಲಿ ಇನ್ನೂ ರೂಪುಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೊದಲು ವಯಸ್ಕರ ಮೇಲೆ ಇದನ್ನು ಪ್ರಯೋಗಿಸಲು ಮುಂದಾಗಿದೆ.

ಕಂಪನಿಯ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಈಗಾಗಲೇ ಒಂದು ಕೋಟಿ ಲಸಿಕಾ ಡೋಸ್‌ಗಳಿಗೆ ಪ್ರತಿ ಡೋಸ್‌ಗೆ 265 ರೂಪಾಯಿ ದರದಲ್ಲಿ ಕಾರ್ಯಾದೇಶ ನೀಡಿದೆ. ಇದರ ಜತೆಗೆ 93 ರೂಪಾಯಿಗಳನ್ನು ಲಸಿಕೆ ನೀಡಲು ಅಗತ್ಯವಾಗಿರುವ ಸೂಜಿಮುಕ್ತ ಇಂಟ್ರಾಡೆರ್ಮಲ್ ಅಪ್ಲಿಕೇಟರ್‌ಗಾಗಿ ವಿಧಿಸಲಾಗುತ್ತದೆ. ಈ ಪೂರೈಕೆಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು.

ಜೈಕೋವ್-ಡಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಎರಡನೇ ಕೋವಿಡ್-19 ಲಸಿಕೆಯಾಗಿದ್ದು, ಆರಂಭದಲ್ಲಿ ಇವುಗಳನ್ನು ಕಡಿಮೆ ಮೊದಲ ಡೋಸ್ ನೀಡಲಾಗಿರುವ ಏಳು ರಾಜ್ಯಗಳಲ್ಲಿ ಬಳಸಲಾಗುತ್ತದೆ. ಆ ಬಳಿಕ ರಾಷ್ಟ್ರವ್ಯಾಪಿ ಆರಭಿಸಲಾಗುತ್ತದೆ. ಈ ಏಳು ರಾಜ್ಯಗಳೆಂದರೆ ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News