ಪೆಗಾಸಸ್ ಗೂಢಚರ್ಯೆ ಪ್ರಕರಣ:ಬಂಗಾಳದ ತನಿಖೆಗೆ ಸುಪ್ರೀಂಕೋರ್ಟ್ ತಡೆ
ಹೊಸದಿಲ್ಲಿ,ಡಿ.17: ಪೆಗಾಸಸ್ ಬೇಹುಗಾರಿಕೆ ಆರೋಪಗಳ ತನಿಖೆಗಾಗಿ ಪಶ್ಚಿಮ ಬಂಗಾಳ ಸರಕಾರವು ರಚಿಸಿರುವ ಆಯೋಗದ ಮುಂದಿನ ಎಲ್ಲ ಕಲಾಪಗಳಿಗೆ ಸರ್ವೋಚ್ಚ ನ್ಯಾಯಾಯವು ಶಕ್ರವಾರ ತಡೆಯಾಜ್ಞೆಯನ್ನು ನೀಡಿದೆ. ಪ.ಬಂಗಾಳ ಸರಕಾರವು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನ್ಯಾ.ಎಂ.ಬಿ.ಲೋಕೂರ್ ಅವರ ನೇತೃತ್ವದಲ್ಲಿ ಈ ಆಯೋಗವನ್ನು ರಚಿಸಿದೆ.
ಆಯೋಗವನ್ನು ಪ್ರಕರಣದಲ್ಲಿ ಕಕ್ಷಿದಾರನಾಗಿ ಸೇರಿಸಲೂ ಅರ್ಜಿದಾರರಿಗೆ ಅನುಮತಿ ನೀಡಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು,ಆಯೋಗಕ್ಕೆ ನೋಟಿಸನ್ನು ಹೊರಡಿಸಿತು. ಪೆಗಾಸಸ್ ಬೇಹುಗಾರಿಕೆ ಆರೋಪಗಳ ತನಿಖೆಗೆ ಸರ್ವೋಚ್ಚ ನ್ಯಾಯಾಲಯವು ಸಮಿತಿಯೊಂದನ್ನು ರಚಿಸಿದ್ದರೂ ಆಯೋಗವು ತನ್ನ ಕಲಾಪಗಳನ್ನು ಮುಂದುವರಿಸಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ನ್ಯಾಯಾಲಯಕ್ಕೆ ಈ ಹಿಂದೆ ಭರವಸೆಯನ್ನು ನೀಡಿದ್ದರೂ ಆಯೋಗವು ಹೇಗೆ ವಿಚಾರಣೆಯನ್ನು ಆರಂಭಿಸಿದೆ ಎಂದು ಪ.ಬಂಗಾಳದ ಪರ ಹಿರಿಯ ನ್ಯಾಯವಾದಿ ಎ.ಎಂ.ಸಿಂಘ್ವಿಯವರನ್ನು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ತಾನು ಆಯೋಗವನ್ನಲ್ಲ,ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಿದ್ದೇನೆ ಮತ್ತು ನ್ಯಾಯಾಲಯದ ನಿರ್ದೇಶಗಳನ್ನು ಆಯೋಗಕ್ಕೆ ತಿಳಿಸಿದ್ದೆ ಎಂದು ಹೇಳಿದ ಸಿಂಘ್ವಿ,ಆಯೋಗದ ಮೇಲಿನ ನಿರ್ಬಂಧವು ಸರ್ವೋಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸುವವರೆಗೆ ಅಸಿತ್ವದಲ್ಲಿದೆ ಮತ್ತು ಅದು ಬಳಿಕ ತನ್ನ ಕಾರ್ಯವನ್ನು ಆರಂಭಿಸಬಹುದು. ವಿಚಾರಣೆಯನ್ನು ನಡೆಸದಂತೆೆ ರಾಜ್ಯ ಸರಕಾರವಾಗಿ ತಾನು ಆಯೋಗಕ್ಕೆ ಹೇಳುವಂತಿಲ್ಲ ಎಂದರು.
ರಾಜ್ಯ ಸರಕಾರದ ಇಕ್ಕಟ್ಟಿನ ಸ್ಥಿತಿ ತನಗೆ ಅರ್ಥವಾಗುತ್ತದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಆಯೋಗಕ್ಕೆ ನೋಟಿಸನ್ನು ಹೊರಡಿಸುವ ಜೊತೆಗೆ ಅದರ ಮುಂದಿನ ಎಲ್ಲ ಕಲಾಪಗಳಿಗೆ ತಡೆಯಾಜ್ಞೆಯನ್ನು ನೀಡಿತು.