ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ದ.ಕ. ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್
ಮಂಗಳೂರು, ಡಿ.17: ದ.ಕ. ಜಿಲ್ಲೆಯಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಪೊಲೀಸರ ಮೇಲೆ ನಂಬಿಕೆ, ವಿಶ್ವಾಸ ಕಳಕೊಳ್ಳುವಂತಾಗಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿಯ ಘಟನೆ ನಡೆಯುವುದಕ್ಕೂ ಮುನ್ನ ಇಳಂತಿಲದಲ್ಲಿ ನಡೆದಿದ್ದ ಘಟನೆಗೆ ಯಾರು ಕಾರಣ ? ಏಕಾಏಕಿ 20ಕ್ಕೂ ಹೆಚ್ಚು ಜನರು ಸೇರಿ ಒಂದು ಸಮುದಾಯವನ್ನು ಗುರಿಯಾಗಿರಿಸಿ ಹಲ್ಲೆ ನಡೆಸಿದ್ದು ಯಾಕೆ ಎಂದು ಪೊಲೀಸರು ಹೇಳಿಲ್ಲ. ಅದರಲ್ಲಿ ಆರೋಪಿಗಳನ್ನು ಬಂಧಿಸಿದರೆ ಶಾಸಕರು ಬಿಡಿಸಿಕೊಂಡು ಹೋಗಿದ್ದರು. ಪೊಲೀಸರ ತಾರತಮ್ಯ ನೀತಿಯಿಂದಾಗಿ ಈ ರೀತಿಯ ಬೆಳವಣಿಗೆ ಆಗಿದೆ. ಇಂತಹ ಘಟನೆಗಳಿಗೆ ಪೊಲೀಸರೇ ಹೊಣೆ ಎಂದು ಅವರು ಆರೋಪಿಸಿದರು.
ಉಪ್ಪಿನಂಗಡಿ ಠಾಣೆಯ ಮುಂದೆ ಪಿಎಫ್‌ಐ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದು ಯಾಕೆ ? ಒಂದು ಕೋಮಿನವರು ಬೆಳಗ್ಗಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದರೆ, ಸುಮ್ಮನಿದ್ದ ಪೊಲೀಸರು ರಾತ್ರಿ ವೇಳೆ ಲಾಠಿ ಎತ್ತಿದ್ದಾರೆ. ಲೈಟ್ ಆಫ್ ಮಾಡಿ ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ಚೂರಿ ಇರಿತ ಆಗಿದೆ ಎನ್ನುತ್ತಿದ್ದಾರೆ. ಚೂರಿ ಇರಿತ, ಪೊಲೀಸರ ಮೇಲಿನ ದಾಳಿ ಆಗಿದ್ದಕ್ಕೆ ಸಾಕ್ಷ್ಯಗಳಿದ್ದರೆ ಬಿಡುಗಡೆ ಮಾಡಲಿ ಎಂದು ಹೇಳಿದರು.
ಜಿಲ್ಲೆಯಲ್ಲಿ ನಡೆಯುವ ಇಂತಹ ಬೆಳವಣಿಗೆ ನೋಡಿದರೆ ಪೊಲೀಸರ ಮೇಲೆ ನಂಬಿಕೆ, ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಈಗ ನಡೆಯುತ್ತಿರುವ ಘಟನೆ ಕೇವಲ ಸಂಘ ಪರಿವಾರ ಮತ್ತು ಎಸ್‌ಡಿಪಿಐ ನಡುವಿನ ಜಟಾಪಟಿ ಅಷ್ಟೆ. ಇದಕ್ಕೂ ಹಿಂದೂ-ಮುಸ್ಲಿಂ ಸಮುದಾಯಕ್ಕೂ ಸಂಬಂಧ ಇಲ್ಲ. ಇದನ್ನು ಹಾಗೆ ಬಿಂಬಿಸಿ ಕೆಲವರು ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ ಎಂದರು.
ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮುಖಂಡ ಜಿ.ಎ.ಬಾವ, ಪಾಲಿಕೆ ಸದಸ್ಯ ಅಬ್ದುಲ್ ರವೂಫ್, ನವೀನ್ ಡಿಸೋಜಾ ಇದ್ದರು.