×
Ad

ಉಪ್ಪಿನಂಗಡಿ ಪ್ರಕರಣ; ಘಟನಾವಳಿಯ ವೀಡಿಯೊ ಬಿಡುಗಡೆ ಮಾಡಿ: ಎಸ್ಪಿಗೆ ಎಸ್‌ಡಿಪಿಐ ಬಹಿರಂಗ ಸವಾಲು

Update: 2021-12-17 15:54 IST

ಮಂಗಳೂರು, ಡಿ.17: ಕಾನೂನಿಗೆ ವಿಧೇಯವಾಗಿದ್ದಲ್ಲಿ, ನ್ಯಾಯಕ್ಕೆ ಬದ್ಧರಾಗಿ ನಡೆದುಕೊಂಡಿದ್ದಾದಲ್ಲಿ ದ.ಕ. ಜಿಲ್ಲಾ ಎಸ್ಪಿಯವರು ಉಪ್ಪಿನಂಗಡಿ ಪ್ರಕರಣಕ್ಕೆ ಸಂಬಂಧಿಸಿ ಘಟನಾವಳಿಯ ಸಿಸಿಟಿವಿ, ವೀಡಿಯೊ ರೆಕಾರ್ಡಿಂಗ್ ಬಿಡುಗಡೆ ಮಾಡಬೇಕು ಎಂದು ಎಸ್‌ಡಿಪಿಐ ಬಹಿರಂಗ ಸವಾಲು ಹಾಕಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಸವಾಲು ಹಾಕಿದ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪ್ರಕರಣದ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರಕಾರ ನಿರ್ದೇಶನ ನೀಡಬೇಕು. ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ನಾವು ಸಿದ್ಧ ಎಂದು ಹೇಳಿದರು.

ಉಪ್ಪಿನಂಗಡಿಯಲ್ಲಿ ನಡೆದ ದಾಳಿಯೊಂದರ ತನಿಖೆ ನೆಪದಲ್ಲಿ ಪಿಎಫ್ಐ ನಾಯಕರನ್ನು ಠಾಣೆಗೆ ಕರೆಸಿದ ಉಪ್ಪಿನಂಗಡಿ ಪೊಲೀಸರು ಮುಖಂಡರನ್ನು ಬಿಡುಗಡೆ ಮಾಡದೆ ಅಕ್ರಮವಾಗಿ ಠಾಣೆಯಲ್ಲಿ ಕೂಡಿ ಹಾಕಿದ್ದರು. ಇದನ್ನು ಖಂಡಿಸಿ ಠಾಣೆಯ ಎದುರು ಬೆಳಗ್ಗಿನಿಂದ ಸಂಜೆಯವರೆಗೂ ಶಾಂತಿಯುತ ಪ್ರತಿಭಟನೆ ನಡೆಸಲಾಗಿತ್ತು. ಆದರೆ ರಾತ್ರಿ ಹೊತ್ತು ಏಕಾಏಕಿ ಪೊಲೀಸರು ಅಮಾನವೀಯ ರೀತಿಯಲ್ಲಿ ಲಾಠಿಚಾರ್ಜ್ ಮಾಡಿ ಧರ್ಮಗುರು ಸೇರಿದಂತೆ ಹಲವರನ್ನು ಗಾಯಗೊಳಿಸಿದ್ದಲ್ಲದೆ, ಕಾರ್ಯಕರ್ತರು ಮುಖಂಡರ ವಿರುದ್ಧ ಹಲ್ಲೆ, ಮಹಿಳಾ ಸಿಬ್ಬಂದಿ ಮೇಲೆ ಮಾನಭಂಗ ಯತ್ನ, ಚೂರಿ ಇರಿತ, ಠಾಣೆ ಮೇಲೆ ಕಲ್ಲು ತೂರಾಟದಂತಹ ಆರೋಪ ಮಾಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮಾಡಿದ ಸಂವಿಧಾನದ ಬಾಹಿರ ಲಾಠಿಚಾರ್ಜ್‌ನ ತಪ್ಪನ್ನು ಮರೆಮಾಚಲು ಈ ರೀತಿಯ ಪ್ರಕರಣಗಳನ್ನು ದಾಖಲಿಸಿರುವುದು ನೀಚತನದ ಪರಮಾವಧಿ ಎಂದು ಅವರು ಹೇಳಿದರು.

ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ಕೈಮೀರಿದಾಗ ಸೂಚನೆ ನೀಡಿ ಲಾಠಿಚಾರ್ಜ್ ಮಾಡಲು ಅವಕಾಶವಿದೆ. ಆದರೆ ಹೊರಗಡೆ ಪ್ರತಿಭಟನೆ, ಒಳಗಡೆ ನಾಯಕರು ಪೊಲೀಸ್ ಆಧಿಕಾರಿಗಳ ಜತೆ ಮಾತನಾಡುತ್ತಿದ್ದ ಸಂದರ್ಭ ಕಿರಿಯ ಪೊಲೀಸ್ ಅಧಿಕಾರಿಗಳು ಬಂದು ಪ್ರತಿಭಟನಾ ನಿರತರನ್ನುದ್ದೇಶಿಸಿ ಪಿಸ್ತೂಲ್ ತೆಗೆದರೆ ಯಾರನ್ನೂ ನೋಡುವುದಿಲ್ಲ. ನಮ್ಮನ್ನು ಮುಟ್ಟಿದರೆ ಬಿಡುವುದಿಲ್ಲ ಎಂಬ ಮಾತುಗಳ ಮೂಲಕ ಪ್ರಚೋದನೆ ಮಾಡಿರುವುದು ಷಡ್ಯಂತ್ರದ ಭಾಗವಲ್ಲವೇ ? ಎಂದವರು ಪ್ರಶ್ನಿಸಿದರು.

ಕೆಲ ವರ್ಷಗಳ ಹಿಂದೆ ಅಣಕು ಕಾರ್ಯಾಚರಣೆಯೊಂದರಲ್ಲಿ ಬಿಜೆಪಿಯ ನಾಯಕರೊಬ್ಬರು ಜಿಲ್ಲೆಯಲ್ಲಿ ಶೇ. 60ಕಕಿಂತಲೂ ಹೆಚ್ಚು ಮಂದಿ ಪೊಲೀಸರು ಸಂಘ ಪರಿವಾರದವರು ಎಂದು ಹೇಳಿದ್ದರು. ಉಪ್ಪಿನಂಗಡಿಯಲ್ಲಿ ಸಂಘ ಪರಿವಾರದ ಗೂಂಡಾಗಳನ್ನು ಮೀರಿಸುವ ರೀತಿಯಲ್ಲಿ ಪೊಲೀಸರು ನಡೆದುಕೊಂಡಿದ್ದಾರೆ. ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ನಡೆಸಿದ ದಾಳಿಯಿಂದ ಮಾರಣಾಂತಿಕವಾಗಿ ಗಾಯಗೊಂಡು ನಡು ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಂದ ಆ್ಯಂಬುಲನ್ಸ್ ತಡೆದು ಮುಂದೆ ಸಾಗಲು ಬಿಡದೆ ಆ್ಯಂಬುಲೆನ್ಸ್ ಮೇಲೆಯೇ ಬಡಿದು ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಆದರೆ ಈಗ ಕತೆಕಟ್ಟಲಾಗುತ್ತಿದೆ. ಇಂತಹ ಸಾವಿರಾರು ಕತೆಗಳನ್ನು ನಮ್ಮ ಹೋರಾಟದ ಅವಧಿಯಲ್ಲಿ ಅನುಭವಿಸಿಕೊಂಡು ಬಂದಿದ್ದೇವೆ. ಪೊಲೀಸರ ಲಾಠಿ ಏಟು, ಜೈಲಿಗೆ ಬೆದರುವ ಚಳವಳಿ ನಮ್ಮದಲ್ಲ. ಹಾಗಾಗಿ ಪೊಲೀಸರಿಗೆ ಧೈರ್ಯವಿದ್ದಲ್ಲಿ ಠಾಣೆಗೆ ಕಾರ್ಯಕರ್ತರು ಕಲ್ಲು ಹೊಡೆದಿರುವುದು, ದಾಳಿ ಮಾಡಿರುವುದು, ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಮೇಲೆ ನಡೆದ ಹಲ್ಲೆ ಎಲ್ಲದರ ವೀಡಿಯೊ ಬಿಡುಗಡೆಗೊಳಿಸಲಿ. ಅದು ಬಿಟ್ಟು ಠಾಣೆ ಎದುರಿನ ಸಿಸಿ ಕ್ಯಾಮರಾ ಕೆಟ್ಟಿತ್ತು ಎಂಬ ಸಬೂಬು ನೀಡುವುದು ಬೇಡ. ಪತ್ರಿಕಾಗೋಷ್ಠಿ ನಡೆಸುವಾಗಲೂ ಗುಪ್ತಚರ ಇಲಾಖೆಯವರು ಕ್ಯಾಮರಾದಲ್ಲಿ ದೃಶ್ಯಾವಳಿ ಸೆರೆಹಿಡಿಯುವಾಗ ಸ್ಟೇಷನ್ ಎದುರು ನಡೆಯುತ್ತಿದ್ದ ಪ್ರತಿಭಟನೆ ಅಲ್ಲಾದ ಘಟನೆಗಳ ಬಗ್ಗೆ ದೃಶ್ಯಾವಳಿಗಳೂ ಇರಬೇಕಲ್ಲವೇ ?  ಎಂದವರು ಪ್ರಶ್ನಿಸಿದರು.

ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯಿರಿ, ಮಹಿಳಾ ಪೊಲೀಸ್ ಸಿಬ್ಬಂದಿಯ ಕಾಲು ಕಡಿಯಿರಿ ಎಂದು ಬಹಿರಂಗವಾಗಿ ಕರೆ ನೀಡಿರುವ ವ್ಯಕ್ತಿಗಳ ವಿರುದ್ಧ ಖುದ್ದು ಜಿಲ್ಲಾಧಿಕಾರಿಯೇ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲು ವಿಫಲವಾದ ಪೊಲೀಸ್ ಇಲಾಖೆ ಅಮಾಯಕರ ಬಂಧನ ವಿರೋಧಿಸಿ ನಡೆದ ಪ್ರತಿಭಟನಾ ನಿರತರ ಮೇಲೆ ಲಾಠಿ ಪ್ರಹಾರ ನಡೆಸುವುದಾದರೆ ಇಲಾಖೆ ಯಾರ ಹಿತ ಕಾಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ ಎಂದು ಅಬ್ದುಲ್ ಮಜೀದ್ ಹೇಳಿದರು.

ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಷ್ಟ್ರೀಯ ಕಾರ್ಯದರ್ಶಿಗಳಾದ ಅಲ್ಫೋನ್ಸೊ ಪ್ರಾಂಕೊ, ರಿಯಾಝ್ ಫರಂಗಿಪೇಟೆ, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಉಪಸ್ಥಿತರಿದ್ದರು.

ಕೊಠಡಿಯೊಳಗಿದ್ದ ನಾಯಕರ ಮೇಲೂ ಪ್ರಕರಣ ದಾಖಲು

ಸ್ಥಳೀಯ ನಾಯಕರ ಜತೆ ಅಂದು ರಾತ್ರಿ 7.45ಕ್ಕೆ ಡಿವೈಎಸ್‌ಪಿ ಜತೆ ಮಾತನಾಡಲು ಠಾಣೆಗೆ ಹೋಗಿದ್ದೆ. ಎಲ್ಲರೂ ಮಾತನಾಡಿ ಇತ್ಯರ್ಥಕ್ಕೆ ಬರುವ ಹೊತ್ತಿಗೆ ಅಲ್ಲಿದ್ದ ಇನ್ಸ್‌ಪೆಕ್ಟರ್ ಪ್ರಸನ್ನ ಅವರು ಬಂದು ನಮ್ಮಲ್ಲಿಯೂ ಅಸಡ್ಡೆಯಿಂದ ಮಾತನಾಡಿದ್ದಲ್ಲದೆ ಡಿವೈಎಸ್ಪಿಯವರನ್ನು ಹೊರಗೆ ಕರೆದೊಯ್ದಿದ್ದರು. ಆಗ ಸುಮಾರು 9.30ರ ಸಮಯ. ಠಾಣೆಯೊಳಗಿದ್ದ ನಮ್ಮ ಕೊಠಡಿಯನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ಅಷ್ಟು ಹೊತ್ತಿನಲ್ಲೇ ಅಲ್ಲಿ ಲಾಠಿಚಾರ್ಜ್ ಆರಂಭಿಸಲಾಗಿತ್ತು. ಹಲ್ಲೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದ ದೃಶ್ಯವನ್ನು ನಾವು ಅಲ್ಲಿ ಅಸಹಾಯಕರಾಗಿ ಒಳಗಿನಿಂದಲೇ ಕಿಂಡಿಯಿಂದ ನೋಡುತ್ತಿದ್ದೆವು. ಆದರೆ ನನ್ನ ಮೇಲೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಯಾವ ರೀತಿಯ ಅನ್ಯಾಯ ಎಂದು ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News