×
Ad

ಡಿ. 21ರಂದು ಕಾರಿಂಜೇಶ್ವರ ಗಣಿಗಾರಿಕೆ ನಿಲ್ಲಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ನಡಿಗೆ: ಹಿಂದೂ ಜಾಗರಣ ವೇದಿಕೆ

Update: 2021-12-17 16:08 IST

ಮಂಗಳೂರು, ಡಿ.17: ಬಂಟ್ವಾಳ ತಾಲೂಕು ಕಾರಿಂಜದ ಕಾರಿಂಜೇಶ್ವರ ದೇವಳ ಪರಿಸರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ವತಿಯಿಂದ ಡಿ. 21ರಂದು ಬೆಳಗ್ಗೆ 11ಕ್ಕೆ ‘ರುದ್ರಗಿರಿಯ ಭಕ್ತರ ನಡಿಗೆ ಜಿಲ್ಲಾಧಿಕಾರಿ ಕಚೇರಿ ಕಡೆಗೆ’ ಎಂಬ ಎರಡನೇ ಹಂತದ ಹೋರಾಟ ಆಯೋಜಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ತಿಳಿಸಿದರು.

ಕಾರಿಂಜ ಕ್ಷೇತ್ರ ಸುತ್ತಲು ನಡೆಯುತ್ತಿರುವ ಗಣಿಗಾರಿಕೆ ಅಕ್ರಮ. ಇಲ್ಲಿ ನಡೆಯುವ ಎಲ್ಲ ರೀತಿಯ ಗಣಿಗಾರಿಕೆ ಶಾಶ್ವತವಾಗಿ ನಿಲ್ಲಿಸಬೇಕು, ಕ್ಷೇತ್ರದ ಪಾವಿತ್ರ್ಯತೆ ರಕ್ಷಿಸಬೇಕು ಎಂದು ಒತ್ತಾಯಿಸಿ ತಿಂಗಳ ಹಿಂದೆ ರುದ್ರಗಿರಿಯ ರಣಕಹಳೆ ಎಂಬ ಹೋರಾಟ ನಡೆಸಿ, ಗಣಿಗಾರಿಕೆ ನಿಲ್ಲಿಸಲು ಒಂದು ತಿಂಗಳ ಗಡುವು ನೀಡಲಾಗಿತ್ತು. ನಮ್ಮ ಹೋರಾಟಕ್ಕೆ ಸ್ಪಂದನೆ ಸಿಗದಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಿಂದ ಜಿಲ್ಲಾಕಾರಿ ಕಚೇರಿಗೆ ಪಾದಯಾತ್ರೆ ನಡೆಸಿ, ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರಿಂಜ ಕ್ಷೇತ್ರದ ಸುತ್ತಲೂ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ದೇವಳದ ಆವರಣ ಗೋಡೆ ಕುಸಿದು ಬಿದ್ದಿದೆ, ಗರ್ಭಗುಡಿಯ ಮುಂಭಾಗ ಬಿರುಕು ಬಿಟ್ಟಿದೆ. ಭೋಜನಶಾಲೆಯ ಮೇಲ್ಛಾವಣಿ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ನೀರು ಸೋರುತ್ತಿದೆ. ಘನ ಸ್ಫೋಟದಲ್ಲಿ ಕಾರಿಂಜ ಬೆಟ್ಟಕ್ಕೆ ಹಾನಿಯಾಗುತ್ತಿದೆ. ಇದರಿಂದಾಗಿ ದೇವಾಲಯದ ಅಸ್ತಿತ್ವಕ್ಕೆ ಅಪಾಯ ಉಂಟಾಗಿದೆ. ಆದರೂ, ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಡಳಿತ, ಸಂಬಂಧಿಸಿದ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಕಾರಿಂಜೇಶ್ವರ ಕ್ಷೇತ್ರದ ಪರಿಸರದಲ್ಲಿ ನಡೆಯುವ ಎಲ್ಲ ರೀತಿಯ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಸಬೇಕು, ಕ್ಷೇತ್ರದ 10 ಕಿ.ಮೀ. ವ್ಯಾಪ್ತಿಯನ್ನು ಧಾರ್ಮಿಕ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಬೇಕು, ಕ್ಷೇತ್ರದಲ್ಲಿ ಯಾವುದೇ ಅಹಿತಕರ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು, ಅಕ್ರಮ ಗಣಿಗಾರಿಕೆ, ಗೋಮಾಳದ ಅತಿಕ್ರಮಣ, ಅರಣ್ಯ ಲೂಟಿ ಮಾಡಿದವರನ್ನು, ಅದಕ್ಕೆ ಬೆಂಬಲ ನೀಡಿದವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಹಿಂಜಾವೇ ಪ್ರಾಂತ ಉಪಾಧ್ಯಕ್ಷ ಕಿಶೋರ್ ಕುಮಾರ್ ಕೋಡಿಕಲ್, ಮಂಗಳೂರು ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಗುಂಡಳಿಕೆ, ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News