×
Ad

ಪ್ರಧಾನಿ ಕಾರ್ಯಾಲಯ ಆಯೋಜಿಸಿದ್ದ ʼಅಸಹಜ ಆನ್‌ಲೈನ್‌ ಸಂವಾದʼದಲ್ಲಿ ಚುನಾವಣಾ ಆಯುಕ್ತರು ಭಾಗಿ: ವರದಿ

Update: 2021-12-17 16:36 IST

ಹೊಸದಿಲ್ಲಿ: ಪ್ರಧಾನಿ ಕಾರ್ಯಾಲವು ಆಯೋಜಿಸಿದ್ದ ಅಸಹಜವೆಂದು ತಿಳಿಯಲಾದ ಆನ್‍ಲೈನ್ ಸಂವಾದವೊಂದರಲ್ಲಿ ನವೆಂಬರ್ 16ರಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹಾಗೂ ಚುನಾವಣಾ ಆಯುಕ್ತರುಗಳಾದ ರಾಜೀವ್ ಕುಮಾರ್ ಮತ್ತು ಅನೂಪ್ ಚಂದ್ರ ಪಾಂಡೆ ಅವರು ಭಾಗವಹಿಸಿದ್ದರೆಂದು indianexpress.com ವರದಿ ಮಾಡಿದೆ.

ಕೇಂದ್ರ ಕಾನೂನು ಸಚಿವಾಲಯದಿಂದ ಅಸಹಜವೆಂದು ತಿಳಿಯಲಾದ ಟಿಪ್ಪಣಿಯನ್ನು ಚುನಾವಣಾ ಆಯೋಗ ಪಡೆದ ಮರುದಿನ ಈ ಸಭೆ ನಡೆದಿದೆ. ಪ್ರಧಾನಿ ಅವರ ಮುಖ್ಯ ಕಾರ್ಯದರ್ಶಿ ಪಿ ಕೆ ಮಿಶ್ರಾ ಅವರು ಸಮಾನ ಮತದಾರ ಪಟ್ಟಿ (ಕಾಮನ್ ಇಲೆಕ್ಟೋರಲ್ ರೋಲ್) ಕುರಿತಾದ  ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಮುಖ್ಯ ಚುನಾವಣಾ ಆಯುಕ್ತರು ಹಾಜರಿರಬೇಕೆಂದು ನಿರೀಕ್ಷಿಸಿದ್ದಾರೆಂದು ತಿಳಿಸಲಾಗಿತ್ತು.

ಈ ಪತ್ರದಲ್ಲಿ ಬಳಸಲಾದ ಪದಗಳು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿತ್ತು ಹಾಗೂ ಅದು ಒಂದು ರೀತಿಯ ಸಮನ್ಸ್‍ನಂತಿತ್ತು ಹಾಗೂ ಹಿಂದೆ ಈ ವಿಚಾರ ಕುರಿತ ಸಭೆಯಲ್ಲಿ ಆಯೋಗದ ಅಧಿಕಾರಿಗಳು ಭಾಗವಹಿಸುತ್ತಿದ್ದರು, ಆಯುಕ್ತರಲ್ಲ ಎಂದು ವರದಿಯಾಗಿದೆ.

ಚುನಾವಣಾ ಆಯೋಗದ ಸ್ವಾಯತ್ತತೆಯ ದೃಷ್ಟಿಯಿಂದ ಸಾಮಾನ್ಯವಾಗಿ ಚುನಾವಣಾ ಆಯೋಗವು ಕಾರ್ಯಾಂಗದಿಂದ ಸ್ವಲ್ಪ ದೂರವನ್ನು ಕಾಯ್ದುಕೊಳ್ಳುವುದು ಸಾಮಾನ್ಯವಾಗಿದೆ. ಸಚಿವಾಲಯದಿಂದ ಬಂದ ಪತ್ರದಿಂದ ಮುಖ್ಯ ಚುನಾವಣಾ ಆಯುಕ್ತರು ಸ್ವಲ್ಪ ತಳಮಳಗೊಂಡು ತಾವು ಈ ಸಭೆಗೆ ಹಾಜರಾಗುವುದಿಲ್ಲ ಎಂದಿದ್ದರು ಎಂದು ವರದಿಯಾಗಿದೆ. ಪ್ರಧಾನಿಯ ಮುಖ್ಯ ಕಾರ್ಯದರ್ಶಿಯ ಜತೆಗಿನ ಸಭೆಯಲ್ಲಿ  ಆಯೋಗದ ಅಧಿಕಾರಿಗಳು ಹಾಜರಾದರೂ ಈ ಸಭೆಯ ತಕ್ಷಣ ನಡೆದ ಅನೌಪಚಾರಿಕ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಆಯುಕ್ತರು ಭಾಗವಹಿಸಿದ್ದರೆನ್ನಲಾಗಿದೆ. 

ಕೆಲವೊಂದು ಸುಧಾರಣೆಗಳ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿತ್ತು ಎನ್ನಲಾಗಿದ್ದು ಹಾಗೂ ಕೇಂದ್ರ ಸಚಿವ ಸಂಪುಟ ಈ ಸುಧಾರಣೆಗಳಿಗೆ ಅಂಕಿತ ನೀಡಿದೆ ಎನ್ನಲಾಗಿದೆ. ಇದೊಂದು ಅನೌಪಚಾರಿಕ ಸಭೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಯಾವುದೇ  ಚರ್ಚೆ ನಡೆದಿಲ್ಲ ಎಂದು ಹೇಳಲಾಗಿದೆ.

ಏಕಕಾಲದಲ್ಲಿ ಚುನಾವಣೆ ನಡೆಸಲು ಕಾಮನ್ ಇಲೆಕ್ಟೋರಲ್ ರೋಲ್ ಬಿಜೆಪಿಯ ಅಜೆಂಡಾಗಳಲ್ಲಿ ಒಂದಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News