ರೋನಾ ವಿಲ್ಸನ್ ಅವರ ಫೋನ್ ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕ್ ಆಗಿತ್ತು: ಫೊರೆನ್ಸಿಕ್ ವರದಿ
ಮುಂಬೈ,ಡಿ.17: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಜೂನ್ 2018ರಲ್ಲಿ ಸಾಮಾಜಿಕ ಹೋರಾಟಗಾರ ರೋನಾ ವಿಲ್ಸನ್ ಅವರ ಬಂಧನಕ್ಕೆ ಒಂದು ವರ್ಷ ಮೊದಲು ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಅನ್ನು ಬಳಸಿ ಅವರ ಸ್ಮಾರ್ಟ್ ಫೋನ್ ನ ಮೇಲೆ ಕಣ್ಗಾವಲು ಇರಿಸಲಾಗಿತ್ತು ಎನ್ನುವುದನ್ನು ನೂತನ ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಗೊಳಿಸಿದೆ. ಕೈದಿಗಳ ಹಕ್ಕುಗಳ ಕಾರ್ಯಕರ್ತ ಹಾಗೂ ಶಿಕ್ಷಣತಜ್ಞ ವಿಲ್ಸನ್ ಅವರ ಆ್ಯಪಲ್ ಪೋನ್ ಅನ್ನು ಎನ್ಎಸ್ಒ ಗ್ರಾಹಕರು ಕಣ್ಗಾವಲಿಗಾಗಿ ಮಾತ್ರ ಆಯ್ಕೆ ಮಾಡಿಕೊಂಡಿಲಿಲ್ಲ,ಹಲವಾರು ಸಂದರ್ಭಗಳಲ್ಲಿ ಅದರೊಂದಿಗೆ ಯಶಸ್ವಿಯಾಗಿ ರಾಜಿಗಳನ್ನೂ ಮಾಡಿಕೊಳ್ಳಲಾಗಿತ್ತು ಎಂದು ಅಮೆರಿಕದ ಡಿಜಿಟಲ್ ವಿಧಿವಿಜ್ಞಾನ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್ ಹೇಳಿದೆ.
ವಿಲ್ಸನ್ ಅವರ ಐಫೋನ್ 6ಎಸ್ ನ ಎರಡು ಬ್ಯಾಕಪ್‌ಗಳು ಪೆಗಾಸಸ್ ಕಣ್ಗಾವಲು ಸಾಧನದಿಂದ ಸೋಂಕಿತವಾಗಿದ್ದವು ಎನ್ನುವುದನ್ನು ಡಿಜಿಟಲ್ ಕುರುಹುಗಳು ತೋರಿಸಿವೆ ಎಂದು ವಿಶ್ಲೇಷಣಾ ವರದಿಯಲ್ಲಿ ಹೇಳಲಾಗಿದೆ. ಪೆಗಾಸಸ್ ಸ್ಪೈವೇರ್ ಬಳಕೆಗೆ ತಾನು ಸರಕಾರಿ ಏಜನ್ಸಿಗಳಿಗೆ ಮಾತ್ರ ಪರವಾನಿಗೆಯನ್ನು ನೀಡಿರುವುದಾಗಿ ಇಸ್ರೇಲಿನ ಸೈಬರ್ ಸೆಕ್ಯೂರಿಟಿ ಸಂಸ್ಥೆ ಎನ್ಎಸ್ಒ ಗ್ರೂಪ್ ಹೇಳಿಕೊಂಡಿದ್ದರೆ,ತಾನು ಎನ್ಎಸ್ಒ ಗ್ರೂಪ್‌ನ ಗ್ರಾಹಕ ಎನ್ನುವುದನ್ನು ಭಾರತ ಸರಕಾರವು ದೃಢಪಡಿಸಿಯೂ ಇಲ್ಲ,ನಿರಾಕರಿಸಿಯೂ ಇಲ್ಲ.
ಹೊಸ ಸಂಶೋಧನೆಗಳು ಪ್ರಕರಣದಲ್ಲಿ ಬಲವಾದ ಪುರಾವೆಗಳನ್ನು ಒದಗಿಸಿವೆ. ಇವುಗಳನ್ನು ಸಿಂಧುಗೊಳಿಸಲು ಎಲ್ಲ ಕಾನೂನು ಸಾಧ್ಯತೆಗಳನ್ನು ನಾವು ಅನ್ವೇಷಿಸುತ್ತಿದ್ದೇವೆ ’ಎಂದು ಪಿಯುಸಿಎಲ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ.ಸುರೇಶ ತಿಳಿಸಿದರು.