×
Ad

ಅಸ್ಸಾಂ: 244 ಮಂದಿಗೆ ಜಾಗ ತೆರವುಗೊಳಿಸುವಂತೆ ನೀಡಲಾಗಿದ್ದ ನೋಟಿಸ್‍ಗೆ ಗುವಾಹಟಿ ಹೈಕೋರ್ಟ್ ತಡೆಯಾಜ್ಞೆ

Update: 2021-12-17 17:21 IST

ಗುವಾಹಟಿ: ರಾಜ್ಯ ಸರಕಾರದ ಒಡೆತನದ ಜಮೀನಿನಲ್ಲಿ ವಾಸಿಸುತ್ತಿದ್ದಾರೆಂಬ ಕಾರಣಕ್ಕೆ ಅಸ್ಸಾಂನ ಸೋನಿತ್‍ಪುರ್ ಜಿಲ್ಲೆಯ ಧೇಕಿಯಾಜುಲಿ ಪಟ್ಟಣದ 244 ಮಂದಿಗೆ ಜಾಗ ತೆರವುಗೊಳಿಸುವಂತೆ ನೀಡಲಾಗಿದ್ದ ನೋಟಿಸ್‍ಗೆ ಗುವಹಾಟಿ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಈ ಜನರೆಲ್ಲರೂ ಸರಕಾರಿ ಜಮೀನನ್ನು ಒತ್ತುವರಿ ಮಾಡಿದ್ದರೆಂದು ಆರೋಪಿಸಲಾಗಿತ್ತು.

ನವೆಂಬರ್ 15ರಂದು ಧೇಕಿಯಾಜುಲಿ ಕಂದಾಯ ಇಲಾಖಾಧಿಕಾರಿಯು ಬಸಸಿಮಲು ಗ್ರಾಮದ ಈ 224 ಮಂದಿಗೆ ನೋಟಿಸ್ ಜಾರಿಗೊಳಿಸಿದ್ದರಲ್ಲದೆ ಒಂದು ತಿಂಗಳೊಳಗೆ ಒತ್ತುವರಿ ತೆರವುಗೊಳಿಸದೇ ಇದ್ದಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೈಕೋರ್ಟಿನ ಮೊರೆ ಹೋಗಿದ್ದರು. ಈ 244 ಮಂದಿಯ ಪೈಕಿ 81 ಮಂದಿ ಈ ಹಿಂದೆಯೇ ಹೈಕೋರ್ಟ್ ಮೊರೆ ಹೋಗಿ ಈ ಜಮೀನು ರಾಜ್ಯ ಸರಕಾರದ 1978 ಅಧಿಸೂಚನೆಯಂತೆ ತಮ್ಮ ಅಧೀನದಲ್ಲಿದೆ ಎಂದು ಹೇಳಿದ್ದರು. 1989ರಲ್ಲಿ ತೀರ್ಪು ನೀಡಿದ್ದ ವಿಭಾಗೀಯ ಪೀಠ ಸೂಕ್ತ ಪ್ರಾಧಿಕಾರವು ಈ ಕುರಿತು ತೀರ್ಮಾನ ಕೈಗೊಳ್ಳುವ ತನಕ  ಅರ್ಜಿದಾರರಿಗೆ ತೆರವುಗೊಳಿಸುವಂತೆ ನೋಟಿಸ್ ಜಾರಿಗೊಳಿಸಬಾರದೆಂದು ಸೂಚಿಸಿತ್ತು ಎಂಬದುನ್ನೂ  ಇತ್ತೀಚೆಗೆ ಸಲ್ಲಿಸಿದ ಅಪೀಲಿನಲ್ಲಿ ಗ್ರಾಮಸ್ಥರು ತಿಳಿಸಿದ್ದರು.

ಡಿಸೆಂಬರ್ 3ರಂದು ಅವರು ಸಂಬಂಧಿತ ಸಚಿವರಿಗೂ ಮನವಿ ಮಾಡಿದ್ದರು.

ಗ್ರಾಮಸ್ಥರ ವಿರುದ್ಧ ಯಾವುದೇ  ಬಲವಂತದ ಕ್ರಮಕೈಗೊಳ್ಳಬಾರದೆಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News